ರಾಜ್ಯ ಸರಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಸಿಎಂ ಬೊಮ್ಮಾಯಿ
ದಾವಣಗೆರೆ ನ.9 (ಉಡುಪಿ ಟೈಮ್ಸ್ ವರದಿ) : ರಾಜ್ಯ ಸರಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಹಿ ಸುದ್ದಿಯನ್ನು ನೀಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಹಾಗೂ ಇತರೆ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯು ಅವರು ತಿಳಿಸಿದ್ದಾರೆ.
ಹಾಗೂ ಎರಡು ದಿನಗಳಲ್ಲಿ (ನ.8) ವೇತನ ಆಯೋಗ ರಚಿಸಲಾಗುವುದು. ಇದರ ಜೊತೆಗೆ ತ್ವರಿತವಾಗಿ ಮಧ್ಯಂತರ ವರದಿ ನೀಡಲು ಸೂಚಿಸಲಾಗುವುದು. 2023ರ ಮಾರ್ಚ್ ಒಳಗೆ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ಪ್ರಸಕ್ತ ವರ್ಷದ ಅಕ್ಟೋಬರ್ ಅಂತ್ಯದ ಒಳಗೆ ವೇತನ ಆಯೋಗ ರಚನೆ ಮಾಡುವುದಾಗಿ ಈ ಹಿಂದೆ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಇದೀಗ ನ.6 ರಂದು ಮುಖ್ಯಮಂತ್ರಿಯವರನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ನಿಯೋಗ ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಐದು ವರ್ಷಗಳಿಗೆ ಒಮ್ಮೆ ವೇತನ ಆಯೋಗ ರಚನೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿ 4 ವರ್ಷ 7 ತಿಂಗಳಿಗೆ ಆಯೋಗ ರಚನೆ ಮಾಡಲಾಗುತ್ತಿದೆ. ಚುನಾವಣೆ ನೀತಿ ಸಂಹಿತೆ ಘೋಷಣೆಗೂ ಮೊದಲೇ ನೌಕರರಿಗೆ ಮೂಲ ವೇತನದಲ್ಲಿ ಗಣನೀಯ ಹೆಚ್ಚಳವಾಗಲಿದೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ರಾಜ್ಯ ಎಲ್ಲಾ ನೌಕರರ ಪರವಾಗಿ ನ.10 ರಂದು ರೇಸ್‍ಕೋರ್ಸ್ ರಸ್ತೆಯ ಅವರ ನಿವಾಸದಲ್ಲಿ ಸನ್ಮಾನಿಸಲಾಗುವುದು ಎಂದು ಷಡಾಕ್ಷರಿ ಅವರು ತಿಳಿಸಿದ್ದಾರೆ.