ಮತ್ತೊಂದು ಬ್ಯಾಂಕಿನಲ್ಲಿ 100 ಕೋಟಿ ರೂ. ವಂಚನೆ ಪ್ರಕರಣ- ಬ್ಯಾಂಕ್ ನ ಅಧ್ಯಕ್ಷ,ಉಪಾಧ್ಯಕ್ಷ ಸಹಿತ ಐವರು ಅರೆಸ್ಟ್!

ಬೆಂಗಳೂರು ನ.9 : ಠೇವಣಿದಾರರಿಗೆ 100 ಕೋಟಿ ವಂಚಿಸಿರುವ ಆರೋಪದ ಮೇಲೆ ಕುರುಹಿನಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷನ ಸಹಿತ ಐವರನ್ನು ಕೆಂಪೇಗೌಡನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುರುಹಿನಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಬಿ.ಎಲ್. ಶ್ರೀನಿವಾಸ್ (64), ಉಪಾಧ್ಯಕ್ಷ ಬಿ. ಈಶ್ವರ್ (71), ಸಾಲಗಾರರಾದ ದಯಾನಂದ ಹೆಗ್ಡೆ (50), ವಿ. ನಾಗೇನಹಳ್ಳಿಯ ಪಿ. ಚಂದ್ರಶೇಖರ್ (55) ಹಾಗೂ ಸುರಭಿ ಚಿಟ್ಸ್ ಸಂಸ್ಥೆಯ ಬಿ.ಟಿ. ಮೋಹನ್ (75) ಬಂಧಿತ ಆರೋಪಿಗಳು.

ಈ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ನೀಡಿರುವ ಪೊಲೀಸರು, 2011ರಿಂದ 2022ರವರೆಗೆ ನಡೆದಿದೆ ಎನ್ನಲಾದ ಸುಮಾರು 100 ಕೋಟಿ ಅಕ್ರಮದ ಬಗ್ಗೆ ಕೆಲ ಠೇವಣಿದಾರರು ದೂರು ನೀಡಿದ್ದರು. ಅದರನ್ವಯ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದ್ದು, ಲೆಕ್ಕ ಪರಿಶೋಧಕರ ಸಹಾಯದಿಂದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹಾಗೂ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇತರರು ಅಕ್ರಮ ಹಣ ಗಳಿಕೆ ಮೂಲಕ ಹಲವೆಡೆ ಆಸ್ತಿ ಸಂಪಾದಿಸಿರುವ ಮಾಹಿತಿ ಇದ್ದು, ಸದ್ಯ ಆಸ್ತಿಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಪಟ್ಟಿ ಅಂತಿಮವಾದ ನಂತರ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

‘ಸಾಲ ಕೋರಿ ಅರ್ಜಿ ಸಲ್ಲಿಸುವವರ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿರಲಿಲ್ಲ. ನಿಯಮಬಾಹಿರವಾಗಿ ಸುಸ್ತಿದಾರರಿಗೂ ನೂರಾರು ಕೋಟಿ ರೂಪಾಯಿ ಮಿತಿಮೀರಿದ ಸಾಲ ಮಂಜೂರು ಮಾಡಲಾಗಿತ್ತು. ಸುರಭಿ ಚಿಟ್ಸ್ ಸಂಸ್ಥೆ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದ ಅಧ್ಯಕ್ಷ-ಉಪಾಧ್ಯಕ್ಷ ಠೇವಣಿದಾರರ ಹಣವನ್ನು ತಮಗೆ ಬೇಕಾದವರಿಗೆ ಸಾಲ ಕೊಡಿಸಿದ್ದರು. ಇದಕ್ಕಾಗಿ ಕಮಿಷನ್ ಸಹ ಪಡೆದಿದ್ದರೆಂಬುದು ಗೊತ್ತಾಗಿದೆ.’ ಇನ್ನು ‘ಸಾಲ ಪಡೆದ ವ್ಯಕ್ತಿಗಳು ವಾಪಸು ಪಾವತಿ ಮಾಡಿರಲಿಲ್ಲ. ಇದರಿಂದಾಗಿ ಬ್ಯಾಂಕ್ ಆರ್ಥಿಕವಾಗಿ ನಷ್ಟಕ್ಕೆ ಸಿಲುಕಿತ್ತು. ಠೇವಣಿದಾರರು ತಮ್ಮ ಹಣ ವಾಪಸು ನೀಡುವಂತೆ ಒತ್ತಾಯಿಸಲಾರಂಭಿಸಿದ್ದರು. ಆಡಳಿತ ಮಂಡಳಿಯವರು ನಿಗದಿತ ವೇಳೆಗೆ ಹಣ ನೀಡದಿದ್ದರಿಂದ ಠಾಣೆಗೆ ಠೇವಣಿದಾರರು ದೂರು ನೀಡಿದ್ದಾರೆ’ ಎಂದು ಹೇಳಿದ್ದಾರೆ.

ಮಲ್ಲೇಶ್ವರದ ಬ್ರಿಗೇಡ್ ಗೇಟ್‍ವೇ ಅಪಾರ್ಟ್‍ಮೆಂಟ್ ಸಮುಚ್ಚಯದ ನಿವಾಸಿ ಬಿ.ಎಲ್. ಶ್ರೀನಿವಾಸ್, ಬ್ಯಾಂಕ್ ಸ್ಥಾಪನೆಯಾದ 2011ರಿಂದಲೇ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸುತ್ತಿದ್ದರು. ಇದೇ ಅವಧಿಯಲ್ಲಿ ಠೇವಣಿದಾರರಿಂದ ಹಣ ಸಂಗ್ರಹಿಸಿ ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ’. ಹಾಗೂ ಶಾಂತಿನಗರ ಬಸಪ್ಪ ರಸ್ತೆಯ ನಿವಾಸಿ ಬಿ. ಈಶ್ವರ್ 10 ವರ್ಷಗಳಿಂದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದು, ಈತ ಸಹ ಅಕ್ರಮಕ್ಕೆ ಸಹಕರಿಸಿದ್ದರು. ಉಳಿದಂತೆ ಮರಿಯಣ್ಣನಪಾಳ್ಯ ಕಾವೇರಿ ಲೇಔಟ್‍ನ ದಯಾನಂದ ಹೆಗ್ಡೆ, ಆರ್.ಟಿ. ನಗರ ವಿ. ನಾಗೇನಹಳ್ಳಿಯ ಪಿ. ಚಂದ್ರಶೇಖರ್ ಹಾಗೂ ಮೈಕೊ ಲೇಔಟ್‍ನ ಬಿ.ಟಿ. ಮೋಹನ್, ಠೇವಣಿದಾರರ ಹಣವನ್ನೇ ಸಾಲ ಪಡೆದು ವಾಪಸು ಪಾವತಿಸದೇ ವಂಚಿಸಿದ್ದರು’ ಎಂದು ತಿಳಿಸಿದ್ದಾರೆ.

Leave a Reply

Your email address will not be published.

error: Content is protected !!