`ಹಿಂದೂ’ ಭಾರತೀಯ ಪದವೇ ಅಲ್ಲ, ನಾನು ಹೇಳಿದ್ದರಲ್ಲಿ ತಪ್ಪಿಲ್ಲ : ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಬೆಳಗಾವಿ ನ.8 : `ಹಿಂದೂ’ ಶಬ್ಧ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಭಾಷೆಯ ಪದ, ನಾನು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಎರಡು ದಿನಗಳ ಹಿಂದೆ ನೀಡಿದ್ದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಅವರು, `ಹಿಂದೂ’ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದ್ದು ಅಂತಾ ಉಲ್ಲೇಖ ಮಾಡಿದ್ದು ನಿಜ. ಹಿಂದೂ ಶಬ್ದದ ಬಗ್ಗೆ ಕೆಲವು ನಿಂದನೆ ಮಾಡುವಂತ ಸಾಕಷ್ಟು ಶಬ್ದಗಳು ದಾಖಲೆಗಳಲ್ಲಿ ಸಿಗುತ್ತವೆ. ಅದರ ಬಗ್ಗೆ ನಾನು ಕೋಟ್ ಮಾಡಿದ್ದೇನೆ, ಅದು ಸತೀಶ್ ಜಾರಕಿಹೊಳಿ ಮಾತಲ್ಲ. ಈ ರೀತಿಯ ಭಾಷಣಗಳು ದೇಶದಲ್ಲಿ ಸಾವಿರಾರು ಆಗಿವೆ. ಆದರೂ ಇವತ್ತು ನಾನು ಹೇಳಿದ್ದನ್ನು ದೊಡ್ಡಮಟ್ಟದಲ್ಲಿ ವಿಶ್ಲೇಷಣೆ ಮಾಡ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
ಹಾಗೂ ಹಿಂದೂ, ಪಾರ್ಸಿ, ಇಸ್ಲಾಂ, ಜೈನ ಹಾಗೂ ಬೌದ್ಧ ಧರ್ಮ ಯಾವುದೇ ಇರಲಿ, ಜಾತಿ – ಧರ್ಮವನ್ನು ಮೀರಿ ನಾವು ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ನಾನು ಹೇಳಿದರಲ್ಲಿ ಯಾವುದೂ ತಪ್ಪಿಲ್ಲ. ಹಿಂದೂ’ ಶಬ್ಧ ಪರ್ಷಿಯನ್ ಭಾಷೆಯಿಂದ ಬಂದಿದ್ದಕ್ಕೆ ನೂರಾರು ದಾಖಲೆ ಇವೆ. ಆರ್ಯ ಸಮಾಜದ ಸ್ಥಾಪಕರು ದಯಾನಂದ ಸರಸ್ವತಿ ರಚಿಸಿದ
ಸತ್ಯಾರ್ಥ ಪ್ರಕಾಶ’, ಡಾ.ಜಿ.ಎಸ್.ಪಾಟೀಲ ಬರೆದಂತಹ `ಬಸವ ಭಾರತ’ ಪುಸ್ತಕದಲ್ಲಿ ಹಾಗೂ ಬಾಲಗಂಗಾಧರ ತಿಲಕ್ರವರ ಕೇಸರಿ ಪತ್ರಿಕೆಯಲ್ಲೂ ಉಲ್ಲೇಖ ಇದೆ. ಸಾಕಷ್ಟು ವೆಬ್ಸೈಟ್, ವಿಕಿಪೀಡಿಯದಲ್ಲಿ ಮಾಹಿತಿ ಲಭ್ಯ ಇದೆ. ಆದರೆ ನನ್ನ ಹೇಳಿಕೆಯನ್ನು ಉಕ್ರೇನ್-ರಷ್ಯಾ ಯುದ್ದ ಮಾದರಿಯಲ್ಲಿ, ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದೂ ಧರ್ಮದ ವಿಷಯ ಬಂದಾಗ ಇಷ್ಟು ವೈಭವಕರೀಸೋದು ಸರಿಯಲ್ಲ. ಹಿಂದೂಗಳ ಕೊಲೆಯಾದರೆ ಅದಕ್ಕೆ ವಿಶೇಷವಾದ ಸ್ಥಾನಮಾನ, ದಲಿತರು ಯಾರಾದರೂ ತೀರಿಕೊಂಡರೆ ಅದಕ್ಕೆ ಸ್ಥಾನಮಾನ ಇಲ್ಲ ಇದು ನಿಲ್ಲಬೇಕು. ಹಿಂದೂ ಧರ್ಮದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಭಾಷಣ ಒಮ್ಮೆ ಕೇಳಬೇಕು. ಹಿಂದೂ ಧರ್ಮ ಅಂದ್ರೆ ಅದು `ವೇ ಆಫ್ ಲೈಫ್’ ನಮ್ಮ ಬಾಳ್ವೆ ಅಂದಿದ್ದಾರೆ. ಸುಪ್ರೀಂಕೋರ್ಟ್ ಸಹ ತನ್ನ ತೀರ್ಪಿನಲ್ಲಿ ಹೇಳಿದೆ. ನನಗೇನು ಯಾರನ್ನು ಅಪಮಾನ ಮಾಡುವ ಉದ್ದೇಶ ಇಲ್ಲ. ನನ್ನ ಭಾಷಣ ಇನ್ನೂ ಹತ್ತು ಸಲ ನೋಡಿ, ತಪ್ಪಿದ್ರೆ ಚರ್ಚೆ ಮುಂದುವರಿಸಿ. ಸುಖಾ ಸುಮ್ಮನೇ ಆರೋಪ ಮಾಡುತ್ತಿದ್ದರೆ ಮಾನಹಾನಿ ಮೊಕದ್ದಮೆ, ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದರ ಜೊತೆಗೆ ಎರಡು ದಿನಗಳ ಹಿಂದೆ ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಹೇಳಿದ ಒಂದು ಶಬ್ದದ ವಿಷಯ ಮೇಲೆ ಇವತ್ತು ಇಡೀ ರಾಷ್ಟ್ರ ರಾಜ್ಯದ ಎಲ್ಲಾ ಕಡೆ ಚರ್ಚೆ, ವಿಮರ್ಶೆ ಆಗುತ್ತಿದೆ. ಟೀಕೆಗಳು ಕೇಳಿಬರುತ್ತಿವೆ. ಹೀಗಾಗಿ ಸ್ಪಷ್ಟೀಕರಣ ಕೊಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.