ನೋಟ್ ಬ್ಯಾನ್ ನಿಂದ ಎಷ್ಟು ಮನೆಯ ದೀಪ ಆರಿ ಹೋಯ್ತು ಎಂಬ ಅರಿವು ಇದೆಯೇ ? : ದಿನೇಶ್ ಗುಂಡೂ ರಾವ್ ಪ್ರಶ್ನೆ

ಬೆಂಗಳೂರು, ನ.8 : ನೋಟ್ ಬ್ಯಾನ್ ನಿಂದ ಎಷ್ಟು ಮನೆಯ ದೀಪ ಆರಿ ಹೋಯ್ತು ಎಂಬ ಅರಿವು ನಿಮಗಿದೆಯೇ…? ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, `ನೋಟ್ ಬಂಧಿ’ ಎಂಬ ಮೋದಿಯವರ ಐತಿಹಾಸಿಕ ಪ್ರಮಾದಕ್ಕೆ ಇಂದು ಆರನೇ ವರ್ಷದ ಸೂತಕ ದಿನ. ಮೋದಿಯವರೇ, ನೋಟ್ ಬಂಧಿ ಎಂಬ ನಿಮ್ಮ ಎಡಬಿಡಂಗಿ ನಿರ್ಧಾರ ಮಾಡಿದ ಎಡವಟ್ಟು ನಿಮಗೆ ಗೊತ್ತಿದೆಯೇ ? ಕೇವಲ ಪ್ರಚಾರಕ್ಕಾಗಿ ಮಾಡಿದ ನೋಟ್ ಬಂಧಿ ನಿರ್ಧಾರದಿಂದ ಎಷ್ಟು ಮನೆಯ ದೀಪ ಆರಿ ಹೋಯ್ತು ಎಂಬ ಅರಿವು ನಿಮಗಿದೆಯೇ? ನೋಟ್ ಬಂಧಿಯಿಂದ ಯಾರ ಉದ್ಧಾರವಾಯಿತು ? ಎಂದು ಕೇಳಿದ್ದಾರೆ.

ಮೋದಿಯವರ `ನೋಟ್ ಬಂಧಿ’ಯಿಂದ ಬೀದಿ ವ್ಯಾಪಾರಿಗಳು ಬೀದಿಗೆ ಬಿದ್ದರು, ಬಡವರು ಸರ್ವನಾಶವಾದರು, ಭಾರತದ ಆರ್ಥಿಕತೆ ಪಾತಾಳ ಸೇರಿತು. ಜನರ ನೆಮ್ಮದಿ ಗುಡಿಸಿ ಗುಂಡಾಂತರವಾಯಿತು. ನೋಟ್ ಬಂಧಿ ತನ್ನ ಆಡಳಿತದ ದೊಡ್ಡ ಸಾಧನೆ ಎಂದು ಮೋದಿಯವರಿಗೆ ಭಾಷಣ ಬಿಗಿಯಲು ‘ಧಮ್’ ಮತ್ತು ‘ತಾಕತ್ತು’ ಇದೆಯೇ ? ಯಾಕೆ ನೋಟ್ ಬಂಧಿ ಬಗ್ಗೆ ಮೋದಿ ಮಾತನಾಡುವುದಿಲ್ಲ ? ಪ್ರಶ್ನೆ ಕೇಳಿದ್ದಾರೆ.

ಹಾಗೂ `ನೋಟ್ ಬಂಧಿ’ಯಿಂದ ಕಪ್ಪು ಹಣ ತರುತ್ತೇವೆ ಎಂದಿದ್ದರು ಮೋದಿ. ಆ ಕಪ್ಪು ಹಣ ಬಂತೆ ? ನೋಟ್ ಬಂಧಿಯಿಂದ ದೇಶ ಉದ್ಧಾರವಾಗುತ್ತೆ ಎಂದಿದ್ದರು ಮೋದಿ. ದೇಶ ಉದ್ಧಾರವಾಯಿತೇ ? 50 ದಿನ ಅವಕಾಶ ಕೊಡಿ ಇಲ್ಲದಿದ್ದರೆ ನನ್ನನ್ನು ಸುಟ್ಟುಬಿಡಿ ಎಂದಿದ್ದರು ಮೋದಿ. ನೋಟ್ ಬಂಧಿ ವೈಫಲ್ಯಕ್ಕೆ ಎಂದಾದರೂ ಮೋದಿಯವರು ಪ್ರಾಯಶ್ಚಿತ್ತ ಪಟ್ಟರೇ ? ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!