ಕೆ.ಎಸ್.ಈಶ್ವರಪ್ಪ ಫೋಟೋ ಇರುವ ಕರೆನ್ಸಿ ನೋಟ್ ಬಿಡುಗಡೆ ಮಾಡಿದ ಕಾಂಗ್ರೆಸ್
ಬೆಂಗಳೂರು ನ.4 : ಪೇ ಸಿಎಂ ಪೋಸ್ಟರ್ ಬಳಿಕ ಇದೀಗ ಬಿಜೆಪಿ ಶಾಸಕ ಈಶ್ವರಪ್ಪ ಅವರ ಫೋಟೋ ಇರುವ ಕರೆನ್ಸಿ ನೋಟೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
‘ಶಾಸಕ ಸಂಗಮೇಶ್ ಅವರಿಗೆ ನಾನು ನೀಡಿದ್ದು 500 ಕೋಟಿ ಆಫರ್’ ಎಂಬ ಈಶ್ವರಪ್ಪ ಅವರ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ರೀತಿ ವ್ಯಂಗ್ಯ ಮಾಡಿದೆ ಎನ್ನಲಾಗುತ್ತಿದೆ.
ಶಾಸಕ ಈಶ್ವರಪ್ಪ ಅವರ ಫೋಟೋ ಇರುವ ಕರೆನ್ಸಿ ನೋಟ್ ವೊಂದನ್ನು ಸಿದ್ಧಪಡಿಸಿರುವ ರಾಜ್ಯ ಕಾಂಗ್ರೆಸ್ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ‘ಆಪರೇಷನ್ ಕಮಲ’ವನ್ನು ಟೀಕಿಸಿದೆ.
ಸಿಎಂ ಹುದ್ದೆಗೆ 2,500 ಕೋಟಿ ಪಾವತಿಸುವಾಗ ಆಪರೇಷನ್ ಕಮಲಕ್ಕೆ 500 ಕೋಟಿ ಹೆಚ್ಚಲ್ಲ ಅಲ್ಲವೇ..? ಈಶ್ವರಪ್ಪ ಅವರೇ, ನೋಟ್ ಎಣಿಸುವ ಮೆಷಿನ್ ಇಟ್ಟಿದ್ದು ಆಪರೇಷನ್ ಕಮಲದ 500 ಕೋಟಿ ಎಣಿಸುವುದಕ್ಕಾ.?, 40 ಪರ್ಸೆಂಟ್ ಕಮಿಷನ್ ನ ಲೂಟಿಯ ಹಣ ಎಣಿಸುವುದಕ್ಕಾ..? 500 ಕೋಟಿ ಹೂಡಿಕೆ ಹಿಂತೆಗೆಯಲೆಂದೇ ಸಂತೋಷ್ ಪಾಟೀಲ್ ಜೀವ ತೆಗೆದಿರಾ..?’ ಎಂದೂ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
‘ಆಪರೇಷನ್ ಕಮಲದ ವೇಳೆ ಸಂಗಮೇಶ್ ಅವರಿಗೆ ಬಿಜೆಪಿ 150 ಕೋಟಿ ನೀಡುವ ಆಮಿಷ ಒಡ್ಡಿತ್ತು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೆ.ಎಸ್ ಈಶ್ವರಪ್ಪ ಅವರು, ‘ಡಿ.ಕೆ.ಶಿವಕುಮಾರ್ಗೆ ಶಾಸಕರ ಬೆಲೆ ಗೊತ್ತಿಲ್ಲ. ನಾನು ಸಂಗಮೇಶ್ಗೆ ಕೊಟ್ಟಿದ್ದು 500 ಕೋಟಿ ಆಫರ್’ ಎಂದಿದ್ದರು.