ಸುಳ್ಯ: ಹೃದಯಾಘಾತದಿಂದ 2ನೇ ತರಗತಿ ವಿದ್ಯಾರ್ಥಿ ಮೃತ್ಯು

ಸುಳ್ಯ ನ.4 : ತಾಲೂಕಿನ ಶಾಲೆಯೊಂದರ ಎರಡನೇ ತರಗತಿಯ ವಿಧ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಕುಂಟಿಕಾನ ನಿವಾಸಿ ಮೋಕ್ಷಿತ್ ಕೆ.ಸಿ ಮೃತಪಟ್ಟ ಬಾಲಕ
ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿ ಮೋಕ್ಷಿತ್ ಕೆ.ಸಿ ಎಂದಿನಂತೆ ಬೆಳಿಗ್ಗೆ ಶಾಲೆಗೆ ಹೋಗಿದ್ದಾನೆ. ಮಧ್ಯಾಹ್ನದ ವೇಳೆಗೆ ಬಾಲಕನಿಗೆ ಜ್ವರ ಕಾಣಿಸಿಕೊಂಡಿದ್ದು, ಕೂಡಲೇ ಶಿಕ್ಷಕರು ದೂರವಾಣಿ ಮೂಲಕ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬಾಲಕನ ತಂದೆ ಚಂದ್ರಶೇಖರ ಆಚಾರ್ಯ ಅವರು ಶಾಲೆಗೆ ಬಂದಿದ್ದರು. ಇದೇ ವೇಳೆ ಬಾಲಕ ನಿಂತಲ್ಲಿಯೇ ಕುಸಿದು ಬಿದ್ದಿದ್ದಾನೆ. ತಕ್ಷಣ ಬಾಲಕನನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಯಲ್ಲಿ ಬಾಲಕನನ್ನು ಪರೀಕ್ಷಿಸಿದ ವೈದ್ಯರು ತುರ್ತು ಚಿಕಿತ್ಸಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದ್ದರು. ಆದರೆ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.