ಶಾಸಕ ರೇಣುಕಾಚಾರ್ಯ ಸೋದರನ ಪುತ್ರನ ಮೃತದೇಹ ಕಾಲುವೆಯಲ್ಲಿ ಪತ್ತೆ
ದಾವಣಗೆರೆ ನ.3 : ಕಳೆದ ಐದು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಅವರ ಮೃತದೇಹ ಕಡದಕಟ್ಟೆ ಬಳಿ ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದೆ.
ಚಂದ್ರಶೇಖರ್ ಅವರ ನಾಪತ್ತೆ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರಿಗೆ ಮೊದಲಿಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆಯ ತುಂಗಾ ಕಾಲುವೆ ಬಳಿ ಕಾರು ಸಂಚರಿಸಿರುವ ಕುರುಹುಗಳು ಪತ್ತೆಯಾಗಿದ್ದವು. ಇದನ್ನು ಪರಿಶೀಲನೆ ಮಾಡಿದ ಕಾರು ಸಹ ತುಂಗ ಕಾಲುವೆಯಲ್ಲಿ ಪತ್ತೆಯಾಗಿದೆ. ಬಳಿಕ ಕ್ರೇನ್ ಬಳಸಿ ಕಾರನ್ನು ಮೇಲೆತ್ತಿದ್ದಾಗ ಕಾರಿನಲ್ಲಿ ಚಂದ್ರಶೇಖರ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ದಾವಣಗೆರೆ ಎಸ್‍ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿದ್ದು, ಚಂದ್ರಶೇಖರ್ ಮೃತದೇಹವನ್ನು ಪೊಲೀಸರು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿದ್ದಾರೆ. ಇನ್ನು ಚಂದ್ರಶೇಖರ್ ಅವರ ಕಾರು ಕಾಲುವೆಗೆ ಹೇಗೆ ಬಿತ್ತು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರ್ ಭಾನುವಾರ (ಅ.30) ರಾತ್ರಿ 11.30 ರಿಂದ ನಾಪತ್ತೆಯಾಗಿದ್ದರು. ಭಾನುವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರ ಶೇಖರ್ ಅವರು ರಾತ್ರಿ ಊರಿಗೆ ವಾಪಸ್ ಆಗಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ದೆಹಲಿಯ ಸ್ನೇಹಿತರ ಜೊತೆ ಕೊನೆಯದಾಗಿ ಮಾತಾಡಿದ್ದು, 11.30 ಕ್ಕೆ ಹೊನ್ನಾಳಿ ಪಟ್ಟಣದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಸಿಗ್ನಲ್ ಟ್ರೇಸ್ ಆಗಿರಲಿಲ್ಲ. ಅಲ್ಲದೆ ಶಿವಮೊಗ್ಗ ದಿಂದ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಗೆ ಬಂದ ಸಿಸಿ ಕ್ಯಾಮರಾ ಪುಟೇಜ್ ಮಾತ್ರ ಸಿಕ್ಕಿತ್ತು. ಆದರೆ ಸುರಹೊನ್ನೆಯಿಂದ ಹೊನ್ನಾಳಿ ಗೆ ಬಂದ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಚಂದ್ರಶೇಖರ್ ಮೊಬೈಲ್ ಮಾತ್ರ ಹೊನ್ನಾಳಿ ಪಟ್ಟಣದ ಸರ್ಕಲ್ ನಲ್ಲಿ ಸ್ವಿಚ್ ಆಫ್ ಆಗಿತ್ತು ಎಂದು ತಿಳಿದು ಬಂದಿದೆ.