ಇನ್ಸ್ ಪೆಕ್ಟರ್ ನಂದೀಶ್ ಸಾವು ಪ್ರಕರಣ : ಗೃಹ ಸಚಿವ ಸಹಿತ 6 ಮಂದಿ ವಿರುದ್ಧ ದೂರು

ಕೆ.ಆರ್.ಪುರ ನ.3 : ಅಮಾನತುಗೊಂಡಿದ್ದ ಇನ್‌ಸ್ಪೆಕ್ಟರ್ ಎಚ್.ಎಲ್.ನಂದೀಶ್ ಅವರು ಹೃದಯಾಘಾತದಿಂದ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಚಿವರು ಮತ್ತು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿ 6 ಜನರ ವಿರುದ್ಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ನಗರ ಪೊಲೀಸ್ ಅಯುಕ್ತ ಪ್ರತಾಪ ರೆಡ್ಡಿ, ಸಿಸಿಬಿ ಎಸಿಪಿ ರೀನಾ ಸುವರ್ಣ, ಬೈರತಿ ಬಸವರಾಜ ಸಹೋದರ ಗಣೇಶ್ ಮತ್ತು ಸಂಬಂಧಿ ಚಂದ್ರಪ್ಪ ವಿರುದ್ಧ ಸೆಕ್ಷನ್ 304 (ಎ) ಮತ್ತು 107 ಅಡಿಯಲ್ಲಿ ಎಫ್.ಐ.ಆರ್ ದಾಖಲಿಸುವಂತೆ ದೂರು ನೀಡಿದ್ದಾರೆ.

ಕರ್ತವ್ಯ ಲೋಪ ಆರೋಪದ ಅಡಿ ಅಮಾನತುಗೊಂಡಿದ್ದ ನಂದೀಶ್ ಅವರು ಮಾನಸಿಕವಾಗಿ ನೊಂದು ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಬೈರತಿ ಬಸವರಾಜ ಅವರ ಸಂಬಂಧಿಗಳ ಕಿರುಕುಳವೇ ಇನ್‌ಸ್ಪೆಕ್ಟರ್ ನಂದೀಶ್ ಹೃದಯಾಘಾತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಹಾಗೂ ಅಮಾನತು ಮಾಡುವ ಮೊದಲು ನಂದೀಶ್ ಅವರಿಂದ ಮಾಹಿತಿ ಕೇಳಲಿಲ್ಲ. ಇದೆಲ್ಲವೂ ನಂದೀಶ್ ಸಾವಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು. ಆರೋಪಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಬೇಕು ಇಲ್ಲದಿದ್ದರೆ ನ್ಯಾಯಾಲಯದ ಮೊರೆಹೋಗುವುದಾಗಿ ಅಬ್ರಹಾಂ ಎಚ್ಚರಿಸಿದ್ದಾರೆ.

‘ಬೈರತಿ ಬಸವರಾಜ ಸಹೋದರ ಗಣೇಶ ಮತ್ತು ಸಂಬಂಧಿ ಚಂದ್ರಪ್ಪ ಅವರು ಹೇಳಿದಂತೆ ಕೇಳಲಿಲ್ಲ, ಅಕ್ರಮಗಳಿಗೆ ಸಹಕಾರ ನೀಡಲಿಲ್ಲ ಎಂಬ ಕಾರಣದಿಂದಾಗಿ ನಂದೀಶ್ ಅವರನ್ನು ಗುರಿಯಾಗಿಕೊಂಡಿದ್ದರು. ಗಣೇಶ್ ಮತ್ತು ಚಂದ್ರಪ್ಪ ಕ್ಷೇತ್ರದಲ್ಲಿ ಖಾಲಿ ಸೈಟ್‌ನಲ್ಲಿ ಬೇಲಿ ಹಾಕಿಸಿ ಹಣ ವಸೂಲಿ, ಸರ್ಕಾರಿ ಅಧಿಕಾರಿಗಳಿಂದ ಹಪ್ತಾ ವಸೂಲಿ, ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ’. ‘ಉಪ್ಪಾರಪೇಟೆಯಿಂದ ದಾಳಿ ನಡೆಸಲು ಬರುವ ಸಿಸಿಬಿ ಅಧಿಕಾರಿಗಳಿಗೆ ಮೆಜೆಸ್ಟಿಕ್, ಹೈ ಗ್ರೌಂಡ್ಸ್ ಪೊಲೀಸ್ ಠಾಣೆ, ಇಂದಿರಾ ನಗರದಲ್ಲಿರುವ ಪಬ್‌ಗಳು ಕಾಣಲಿಲ್ಲವೆ ಎಂದು ಪ್ರಶ್ನಿಸಿದ್ದಾರೆ. 

ಹಾಗೂ ಗಣೇಶ್ ಮತ್ತು ಚಂದ್ರಪ್ಪನ ಕುಮ್ಮಕ್ಕಿನಿಂದ ಉದ್ದೇಶಪೂರ್ವಕವಾಗಿ ಸಿಸಿಬಿಗೆ ಮಾಹಿತಿ ನೀಡಿ, ದಾಳಿ ನಡೆಸುವಂತೆ ಮಾಡಿದ್ದರು. ನಂದೀಶ್ ಅವರನ್ನು ಕೆಲಸದಿಂದ ಅಮಾನತು ಮಾಡುವಂತೆ ಒತ್ತಡ ಹಾಕಿದ್ದರು. ಹೀಗಾಗಿ, ಬೈರತಿ ಬಸವರಾಜ ಅವರು ಗೃಹ ಸಚಿವರಿಗೆ ಒತ್ತಡ ತಂದು ಕಮಿಷನರ್ ಮೂಲಕ ಅಮಾನತು ಆಗುವಂತೆ ಮಾಡಿದ್ದಾರೆ. ಅಲ್ಲದೇ ಪೋಸ್ಟಿಂಗ್‌ ಗಾಗಿ ಬೈರತಿ ಬಸವರಾಜ ಹಾಗೂ ಗೃಹ ಸಚಿವರಿಗೆ ದೊಡ್ಡ ಮೊತ್ತ ನೀಡಿರುವ ಮಾಹಿತಿ ಇದೆ’ ಎಂದು ಅವರು ದೂರಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!