ತನಿಖಾ ಸಂಸ್ಥೆಗಳು ಆರೋಪಿಗಳಿಂದ ಎಲೆಕ್ಟ್ರಾನಿಕ್ ಸಾಧನಗಳ ಪಾಸ್ ವರ್ಡ್ ಗಳನ್ನು ನೀಡಲು ಒತ್ತಾಯಿಸುವಂತಿಲ್ಲ: ದಿಲ್ಲಿ ನ್ಯಾಯಾಲಯ

ಹೊಸದಿಲ್ಲಿ,ನ.3: ಕ್ರಿಮಿನಲ್ ಪ್ರಕರಣಗಳ ಆರೋಪಿಗಳನ್ನು ತಮ್ಮ ವಿದ್ಯುನ್ಮಾನ ಸಾಧನಗಳ ಪಾಸ್ ವರ್ಡ್ ಗಳನ್ನು ಒದಗಿಸುವಂತೆ  ತನಿಖಾ ಸಂಸ್ಥೆಗಳು ಒತ್ತಾಯಿಸುವಂತಿಲ್ಲ ಎಂದು ದಿಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯ ಹೇಳಿದೆ.

ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಮಹೇಶ್ ಕುಮಾರ್ ಶರ್ಮಾಗೆ ತನ್ನ ಕಂಪ್ಯೂಟರ್ ನ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಒದಗಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ನರೇಶ್ ಕುಮಾರ್ ಲಾಕಾ ಅವರು, ಪಾಸ್ ವರ್ಡ್ ನೀಡುವಂತೆ ಆರೋಪಿಯನ್ನು ಬಲವಂತಗೊಳಿಸುವುದು ಸಂವಿಧಾನದ ವಿಧಿ 20(3)ನ್ನು ಉಲ್ಲಂಘಿಸುತ್ತದೆ. ಈ ವಿಧಿಯು ಸ್ವಯಂ-ದೋಷಾರೋಪಣೆಯ ವಿರುದ್ಧದ ಹಕ್ಕಿಗೆ ಸಂಬಂಧಿಸಿದೆ ಎಂದಿದ್ದಾರೆ. 

ಹಾಗೂ ಪಾಸ್ ವರ್ಡ್ ಗಳನ್ನು ನೀಡುವಂತೆ ತನಿಖಾ ಸಂಸ್ಥೆಯು ಆರೋಪಿಯನ್ನು ಬಲವಂತಗೊಳಿಸಲು ಸಾಧ್ಯವಿಲ್ಲವಾದರೂ ತನಿಖಾಧಿಕಾರಿಯೋರ್ವರು ಆರೋಪಿಗೆ ಡಾಟಾ ನಷ್ಟವಾಗುವ ಅಪಾಯದೊಂದಿಗೆ ಪರಿಣಿತ ಸಂಸ್ಥೆ ಅಥವಾ ವ್ಯಕ್ತಿಯ ನೆರವಿನಿಂದ ಕಂಪ್ಯೂಟರ್ ನಲ್ಲಿಯ ಡಾಟಾಗಳನ್ನು ಪ್ರವೇಶಿಸಬಹುದು ಎಂದು ಹೇಳಿದ್ದಾರೆ.

ಪಾಸ್ ವರ್ಡ್ ಗಳು ಮತ್ತು ಬಯೋ ಮೆಟ್ರಿಕ್ ಗಳು ಒಂದೇ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ತನ್ನ ಹಿಂದಿನ ತೀರ್ಪೊಂದರಲ್ಲಿ ಎತ್ತಿ ಹಿಡಿದಿದೆಯಾದರೂ, ಇತ್ತೀಚಿಗೆ ಜಾರಿಗೊಂಡಿರುವ ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಕಾಯ್ದೆಯು ಪಾಸ್ ವರ್ಡ್ ಗಳು ಮತ್ತು ಬಯೊಮೆಟ್ರಿಕ್ಗಳ ಕುರಿತು ವಿಭಿನ್ನ ವಿಧಾನಗಳನ್ನು ಹೇಳಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ನ್ಯಾಯಸಮ್ಮತ ತನಿಖೆಗೆ ಅಗತ್ಯವಿರುವಾಗ ಪೊಲೀಸರು ಆರೋಪಿಯಿಂದ ಬಯೋ ಮೆಟ್ರಿಕ್ ಗಳನ್ನು ಪಡೆಯಬಹುದು ಮತ್ತು ಮೊಬೈಲ್ ಫೋನ್/ಕಂಪ್ಯೂಟರ್ ಸಿಸ್ಟಂ/ಇಮೇಲ್/ಸಾಫ್ಟ್ ವೇರ್ ಅಪ್ಲಿಕೇಷನ್ ಇತ್ಯಾದಿಗಳನ್ನು ತೆರೆಯಲು ಬಳಸಬಹುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!