ಗುಜರಾತ್ ತೂಗು ಸೇತುವೆ ದುರಂತ : ಹಳೆ ಕಬ್ಬಣದ ತಂತಿಗಳಿಗೆ ಪಾಲಿಶ್ ಮಾಡಿ ಬಣ್ಣ ಬಳಿದ ಗುತ್ತಿಗೆದಾರ ಕಂಪೆನಿ

ಗಾಂಧಿನಗರ ನ.2 : ಗುಜರಾತ್ ನ ಮೊರ್ಬಿ ತೂಗುಸೇತುವೆಯ ನವೀಕರಣದ ಹೆಸರಿನಲ್ಲಿ ಗುತ್ತಿಗೆ ಪಡೆದ ಕಂಪನಿ ಹಳೆಯ ಕಬ್ಬಣದ ತಂತಿಗಳನ್ನು ಪಾಲಿಶ್ ಮಾಡಿ ಬಣ್ಣ ಮಾತ್ರ ಬಳಿದಿದೆ ಎಂಬ ಆಘಾತಕಾರಿ ಅಂಶ ತನಿಖೆಯಿಂದ ಬಹಿರಂಗವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

“ಗುತ್ತಿಗೆದಾರರು ಬಹುಶಃ ಅಕ್ಟೋಬರ್ 26ರಂದು ಉದ್ಘಾಟನೆಗೆ ಮುನ್ನ ಎಲ್ಲ ಕೇಬಲ್ ಗಳನ್ನು ಪಾಲಿಶ್ ಮಾಡಿ ಬಣ್ಣ ಮಾತ್ರ ಬಳಿದಿದ್ದಾರೆ. ಕೇಬಲ್ ಬದಲಾಯಿಸಲಾಗಿದೆ ಎನ್ನುವುದನ್ನು ಖಚಿತಪಡಿಸುವ ಯಾವ ಅಂಶವೂ ಕಂಡುಬಂದಿಲ್ಲ”. ಈ ಆಯಾಮದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಾಗೂ ಸೇತುವೆ ನವೀಕರಣ ಕಾಮಗಾರಿ ಮುಗಿಸಲು ಡಿಸೆಂಬರ್ ವರೆಗೂ ಕಾಲಾವಕಾಶ ನೀಡಲಾಗಿತ್ತು. ಆದರೆ ದೀಪಾವಳಿಯ ಸಂದರ್ಭದಲ್ಲೇ ಅವಧಿಪೂರ್ವವಾಗಿ ಸಾರ್ವಜನಿಕರಿಗೆ ತೆರೆಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬ್ರಿಟಿಷ್ ಯುಗದ 143 ವರ್ಷ ಹಳೆಯ ಸೇತವೆಯ ತೂಕ ಗಣನೀಯವಾಗಿ ಹೆಚ್ಚುವ ಸಾಧನಗಳನ್ನು ಬಳಸಿರುವುದು ಮಾತ್ರವಲ್ಲದೇ ತುರ್ತು ಪರಿಹಾರ ಮತ್ತು ಸ್ಥಳಾಂತರ ಯೋಜನೆಯೂ ಇರಲಿಲ್ಲ ಎನ್ನುವುದು ಕೂಡಾ ತಿಳಿದು ಬಂದಿದೆ. ಇದೀಗ ತಾಂತ್ರಿಕ ದೋಷಗಳ ಜತೆಗೆ ನವೀಕರಣ ಗುತ್ತಿಗೆ ಪಡೆದ ಸೇತುವೆಯ ಕಾಮಗಾರಿ ಗುಣಮಟ್ಟದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

Leave a Reply

Your email address will not be published. Required fields are marked *

error: Content is protected !!