ಪ್ರಯಾಣಿಕರ ಕೊರತೆ – ಮೈಸೂರು-ಕೊಚ್ಚಿನ್ ವಿಮಾನಯಾನ ಸೇವೆ ರದ್ದು
ಮೈಸೂರು ಅ.31 : ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಆರಂಭವಾಗಿದ್ದ ಮೈಸೂರು-ಬೆಂಗಳೂರು-ಕೊಚ್ಚಿನ್ ಅಲಯನ್ಸ್ ಏರ್ ವಿಮಾನ ಯಾನ ಸೇವೆಯನ್ನು ರದ್ದುಗೊಳಿಸಲಾಗಿದೆ.
2019 ರ ಮಾರ್ಚ್ 31 ರಿಂದ ಆರಂಭಿಸಿದ್ದ ಈ ಸೇವೆಯನ್ನು ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಇಂದಿನಿಂದ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದರಿಂದಾಗಿ ಈ ವಾಯು ಮಾರ್ಗದಲ್ಲಿ ಪ್ರಯಾಣ ಕೈಗೊಳ್ಳುತ್ತಿದ್ದ ಹಲವಾರು ಮಂದಿಗೆ ತೊಂದರೆ ಉಂಟಾಗಿದೆ ಎಂದು ತಿಳಿದು ಬಂದಿದೆ.
ಸರ್ಕಾರದ ಪ್ರಾದೇಶಿಕ ವಿಮಾನ ಸಂಪರ್ಕ ಯೋಜನೆ (ಉದಾನ್) ಅಡಿಯಲ್ಲಿ ಈ ವಿಮಾನಯಾನ ಸೇವೆ ಆಂಭಿಸಲಾಗಿತ್ತು. ಇದು ಕೊಚ್ಚಿನ್ ನಿಂದ ಮೈಸೂರಿಗೆ ಕೇವಲ ಒಂದು ಗಂಟೆಯಲ್ಲಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿತ್ತು. ಪ್ರವಾಸೋದ್ಯಮ ಸಂಸ್ಥೆಗಳ ಪ್ರಕಾರ ಇದು, ಮೈಸೂರು – ಕೊಚ್ಚಿನ್ ವಿಮಾನ ವ್ಯಾಪಾರಿ ಸಮುದಾಯಕ್ಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಲಾಭ ದಾಯಕ ಮಾರ್ಗವಾಗಿತ್ತು. ಏಕೆಂದರೆ ಮೈಸೂರು – ಕೇರಳ ನಡುವೆ ತಡರಾತ್ರಿ ಬಸ್ ಸೇವೆ ಇರಲಿಲ್ಲ. ಇದರಿಂದಾಗಿ ವಿಮಾನಯಾನ ಉದ್ಯಮಿಗಳಿಗೆ ತೀರಾ ಪ್ರಯೋಜನವಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಒಂದು ಗಂಟೆಯಲ್ಲಿ ಉಭಯ ನಗರಗಳ ನಡುವೆ ಪ್ರಯಾಣಿಸಬಹುದಾಗಿದ್ದ ಈ ಸೇವೆಯಿಂದ ಭಾರಿ ಅನುಕೂಲವಾಗುತ್ತಿತ್ತು. ಈ ಪ್ರಯಾಣಕ್ಕೆ ಬಸ್ ನಲ್ಲಿ 8 ಗಂಟೆ ಹಾಗೂ ರೈಲಿನಲ್ಲಿ 12 ಗಂಟೆ ತಗುಲುತ್ತಿತ್ತು. ವಿಮಾನಯಾನ ದರ 2000-2500 ರೂಪಾಯಿ ಮಾತ್ರ ಇತ್ತು ಎಂದು ನಿಯತವಾಗಿ ಪ್ರಯಾಣ ಮಾಡುತ್ತಿದ್ದ ಜೋಮನ್ ವರ್ಗೀಸ್ ಎಂಬ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಹಾಗೂ ಮುಂದಿನ ಆರು ತಿಂಗಳವರೆಗೆ ವಿಮಾನಯಾನ ರದ್ದಪಡಿಸಲಾಗಿದೆ ಎಂದು ಅಲಯನ್ಸ್ ಏರ್ ಅಧಿಕಾರಿಗಳು ಹೇಳಿದ್ದಾರೆ ಎಂಬುದಾಗಿ ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ.