ಉಡುಪಿ: ದೇಶಿ ಗೋ ತಳಿಗಳ ಗೋಧಾಮ ಮತ್ತು ಡೈರಿ ಉದ್ಯಮದಲ್ಲಿ ಯಶಸ್ವಿಯಾದ ಕೈಗಾರಿಕೋದ್ಯಮಿ

ಉಡುಪಿ ಅ.28 (ಉಡುಪಿ ಟೈಮ್ಸ್ ವರದಿ): ಗೋವುಗಳು ದೇವರ ಸ್ವರೂಪ, ಗೋವುಗಳ ಆರೈಕೆ, ಸೇವೆ ಅತ್ಯಂತ ಪೂಜ್ಯನೀಯ ಹಾಗೂ ಪುಣ್ಯದ ಕಾರ್ಯಗಳಲ್ಲಿ ಒಂದು. ಇಂತಹ ಸತ್ಕಾರ್ಯವನ್ನು ಕಳೆದ 5 ವರ್ಷಗಳಿಂದ ಕೈಗಾರಿಕೋದ್ಯಮಿ ಮೂಡಬಿದರೆಯ ಎಸ್.ಕೆ.ಎಫ್ ಉದ್ಯಮ ಸಮೂಹದ ಅಧ್ಯಕ್ಷ ಜಿ. ರಾಮಕೃಷ್ಣ ಆಚಾರ್ ಅವರು ಮಾಡುತ್ತಾ ಬರುತ್ತಿದ್ದಾರೆ.

ಹೆಬ್ರಿಯ ಗ್ರಾಮೀಣ ಪ್ರದೇಶವಾದ ಮುನಿಯಾಲುವಿನಲ್ಲಿ ಪ್ರಕೃತಿ ಮಡಿಲಲ್ಲಿ ಇರುವ ಸಂಜೀವಿನಿ ಫಾರ್ಮ್ ಮತ್ತು ಡೈರಿ ದೇಶಿ ಗೋ ತಳಿಗಳ ಗೋಧಾಮ ರಾಮಕೃಷ್ಣ ಆಚಾರ್ ಅವರ ಕನಸಿನ ಕೂಸು. ಪ್ರಾಚೀನ ಭಾರತವು ಕೃಷಿ ಪದ್ಧತಿಯ ಅನೇಕ ಯಶಸ್ವಿ ಮಾದರಿಗಳನ್ನು ನಮ್ಮ ಮುಂದಿಟ್ಟಿದ್ದರೂ ಅದನ್ನು ಗಮನಿಸದೇ ಆಧುನಿಕತೆಯತ್ತ ಸಾಗುತ್ತಿರುವ ಈ ಕಾಲದಲ್ಲಿ ಪ್ರಾಚೀನ ಕಲ್ಪನೆಯಲ್ಲಿ ಆಧುನಿಕ ಸ್ಪರ್ಶದಲ್ಲಿ ಸಂಜೀವಿನಿ ಫಾರ್ಮ್ ಮತ್ತು ಡೈರಿ ಸ್ಥಾಪಿಸಿ ದೇಶಿ ಗೋವುಗಳನ್ನು ಅಭಿವೃದ್ಧಿಪಡಿಸುವಲ್ಲಿ ಜಿ. ರಾಮಕೃಷ್ಣ ಆಚಾರ್ ಅವರು ಯಶಸ್ವಿಯಾಗಿದ್ದಾರೆ.

ಮುನಿಯಾಲಿನಲ್ಲಿ 27 ಎಕರೆ ವಿಸ್ತೀರ್ಣದಲ್ಲಿರುವ ಸಂಜೀವಿನಿ ಫಾರ್ಮ್ ಮತ್ತು ಡೈರಿಯ ಗೋಧಾಮ, ದೇಶಿಯ ಗೋತಳಿಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಹೆಚ್ಚಿನ ಹಾಲು ಉತ್ಪಾದನೆಗಾಗಿ ಜನರು ವಿದೇಶಿ ತಳಿಗಳನ್ನು ಸಾಕಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದರಿಂದ, ಹಲವಾರು ದೇಸಿ ಗೋತಳಿಗಳು ಅಳಿವಿನಂಚಿನಲ್ಲಿವೆ. ದೇಶಿ ಗೋತಳಿಗಳನ್ನು ಸಂರಕ್ಷಿಸಿ, ಅಭಿವೃದ್ಧಿಗೊಳಿಸಿ ಹಾಗೂ ಗೋವಿನ ಮೌಲ್ಯವನ್ನು ಮುಂದಿನ ಯುವ ಪೀಳಿಗೆಗೆ ತಿಳಿಸುವ ಮಹತ್ವದ ಉದ್ದೇಶದಿಂದ ಗೋಧಾಮದಲ್ಲಿ ಗಿರ್, ಕಾಂಕ್ರೆಜ್, ಪುಂಗನೂರು, ಸಹಿವಾಲ್ ಸಹಿತ ದೇಸಿ ಗೋತಳಿಗಳನ್ನು ಸಾಕಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಗೋ ಧಾಮದಲ್ಲಿ ಗೋವುಗಳು ಸ್ವಚ್ಛಂದವಾಗಿ ತಿರುಗಾಡಲು 8 ಎಕ್ರೆ ಹಾಗೂ ಮೇವು ಬೆಳೆಯಲು 8 ಎಕ್ರೆ ಜಾಗವನ್ನು ಮೀಸಲಿಡಲಾಗಿದೆ. ಹಾಗೂ ಗೋಧಾಮದ ಪ್ರಕೃತಿಯ ಹಚ್ಚ ಹಸುರಿನ ವಾತಾವರಣದಲ್ಲಿ ಗೋವುಗಳು ಸ್ವಚ್ಛಂದವಾಗಿ ತಿರುಗಾಡುತ್ತಾ ತೃಪ್ತಿಯಿಂದ ಮೇಯುವ ವ್ಯವಸ್ಥೆ ಇರುವುದು ಇಲ್ಲಿನ ವೈಶಿಷ್ಟ್ಯ. ಇಲ್ಲಿ ಶುದ್ಧ ದೇಶಿ ಗಿರ್ ಹಸುವಿನ ಹಾಲಿನಿಂದ ಎ2 ತುಪ್ಪ, ಮಜ್ಜಿಗೆ ಮತ್ತು ಲಸ್ಸಿ ತಯಾರಿಸಲಾಗುತ್ತಿದೆ. ದೇಶಿಯ ಹಸುವಿನ ಹಾಲು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕದಂತಹ ಖನಿಜಗಳ ಸಮೃದ್ಧ ಮೂಲವಾಗಿದ್ದು, ನಿರಂತರ ಪ್ರಯೋಗಗಳ ಮೂಲಕ ಡೈರಿ ಉತ್ಪನ್ನಗಳ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತಿದೆ. ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಸ್ವಚ್ಛತೆ ಹಾಗೂ ಪರಿಶುದ್ಧತೆಗೆ ಆದ್ಯತೆ ನೀಡಲಾಗುತ್ತಿದೆ.

ತಮ್ಮ ಈ ಗೋವುಗಳ ಸೇವೆಯ ಬಗ್ಗೆ ಮಾತನಾಡುವ ಗೋಧಾಮದ ಸಂಸ್ಥಾಪಕರಾದ ರಾಮಕೃಷ್ಣ ಆಚಾರ್ ಅವರು, ವಿದೇಶಿ ಸಂಸ್ಕೃತಿಗೆ ಮಾರುಹೋಗಿ ನಮ್ಮ ದೇಶೀ ಸಂಸ್ಕೃತಿ, ಸ್ವಂತಿಕೆಯನ್ನು ಕಳೆದುಕೊಂಡಿರುವಂತಹ ಸ್ಥಿತಿಯಲ್ಲಿ ಗೋಧಾಮವು ಪ್ರಾಚೀನ ಭಾರತದ ಹಳ್ಳಿಯ ಜೀವನ, ಗೋಸಾಕಾಣಿಕೆ, ಪ್ರಾಣಿ ಪಕ್ಷಿಗಳು, ಕೃಷಿ ಆಧಾರಿತ ಜೀವನವನ್ನು ನಡೆಸುವ ನಿಟ್ಟಿನಲ್ಲಿ ಮುಂದಿನ ಜನಾಂಗವು ‘ಮರಳಿ ಹಳ್ಳಿಗೆ’ ಬರುವಂತೆ ಆಕರ್ಷಿಸುವ ಮಹತ್ತರ ಕೆಲಸ ಮಾಡುತ್ತಿದೆ. ಸಾಫ್ಟ್ ವೇರ್, ಮೆಡಿಕಲ್, ಇಂಜಿನಿಯರಿಂಗ್ ಅಥವಾ ಯಾವುದೇ ವೃತ್ತಿಪರ ಉದ್ಯೋಗದಷ್ಟೇ ಹೈನುಗಾರಿಕೆಯು ಮೌಲ್ಯಯುತವಾಗಿದೆ ಎಂಬುದನ್ನು ಸಮಾಜಕ್ಕೆ ಮನದಟ್ಟು ಮಾಡುವ ಪ್ರಯತ್ನದಲ್ಲಿ ನಾವು ತೊಡಗಿದ್ದೇವೆ ಎಂದು ತಿಳಿಸಿದ್ದಾರೆ.

ಉದ್ಯೋಗ ಸೃಷ್ಠಿಯನ್ನು ಪ್ರಮುಖ ಉದ್ದೇಶವಾಗಿ ಇಟ್ಟುಕೊಂಡು ಆರಂಭಗೊಂಡಿರುವ ಗೋಧಾಮದ ಜಿ. ರಾಮಕೃಷ್ಣ ಆಚಾರ್ ಅವರ ಕಾರ್ಯಕ್ಕೆ ಅವರ ಪತ್ನಿಯೂ ಬೆನ್ನೆಲುಬಾಗಿ ಕೈಜೋಡಿಸಿದ್ದಾರೆ. ಹಾಗೂ ಈ ಬಗ್ಗೆ ಮಾತನಾಡುವ ಅವರು, ಹೈನುಗಾರಿಕೆಯನ್ನು ನಾವು ಸಣ್ಣ ಉದ್ಯಮವನ್ನಾಗಿ ಪರಿಗಣಿಸಿ, ಹಲವಾರು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬಹುದು. ಹಸುವಿನ ಹಾಲಿನ ಉಪ ಉತ್ಪನ್ನಗಳಾದ ಮಜ್ಜಿಗೆ, ಬೆಣ್ಣೆ, ತುಪ್ಪ, ಪನೀರ್ ಮುಂತಾದವುಗಳಿಂದ ತಮ್ಮ ತಮ್ಮ ಹಳ್ಳಿಯಲ್ಲೇ ಇದ್ದುಕೊಂಡು ಜನಸಾಮಾನ್ಯರು ಒಂದು ಬ್ರಾಂಡ್ ಅನ್ನು ಹುಟ್ಟುಹಾಕಿ ಸ್ವಾವಲಂಬಿಗಳಾಗಬಹುದು. ಪ್ರತಿ ಹಳ್ಳಿ ಹಳ್ಳಿ – ಮನೆ ಮನೆಗಳಲ್ಲಿ ಹೈನುಗಾರಿಕೆಯನ್ನು ಯುವ ಸಮುದಾಯ ಮಾಡಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರಿಯಾಗುವಂತೆ ಪ್ರೇರೇಪಿಸುವುದು ಗೋ ಧಾಮದ ಉದ್ದೇಶ ಎಂದು ತಿಳಿಸಿದ್ದಾರೆ.

ದೇಶಿ ಗೋವಿನ ಸೆಗಣಿ ಮತ್ತು ಗೋಮೂತ್ರದಿಂದ ಸಾವಯವ ಗೊಬ್ಬರವನ್ನು ತಯಾರಿಸಿ ಕೃಷಿಯಲ್ಲಿ ಬಳಸುವುದರಿಂದ ಮಣ್ಣಿನ ಫಲವತ್ತತೆಯ ರಕ್ಷಣೆಯ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಹುದು. ಗೋಧಾಮ ಗೋ ಆಧಾರಿತ ಸಾವಯವ ಗೊಬ್ಬರವನ್ನು ಬಳಸಿ ರಾಸಾಯನಿಕ ಮುಕ್ತ ಜೋಳವನ್ನು ಬೆಳೆಯುವ ಮೂಲಕ ಗೋಧಾಮವು ಮಾದರಿಯಾಗಿದೆ. ಹೈನುಗಾರಿಕೆಯಿಂದ 4 ವಿಧಗಳಲ್ಲಿ ನಿಯಮಿತವಾಗಿ ಆದಾಯವನ್ನು ಪಡೆಯಬಹುದು. ಪ್ರತಿದಿನ ಹಾಲಿನಿಂದ ಆದಾಯ, ಪ್ರತಿ ವಾರ ಹಾಲಿನ ಉತ್ಪನ್ನಗಳಾದ ಮಜ್ಜಿಗೆ, ಬೆಣ್ಣೆ, ತುಪ್ಪ, ಪನೀರ್ ನಿಂದ ಆದಾಯ ಹಾಗೂ ಗೋ ಆಧಾರಿತ ಸಾವಯವ ಗೊಬ್ಬರವನ್ನು ಬಳಸಿ ಹಣ್ಣು, ತರಕಾರಿಯನ್ನು ಬೆಳೆದು ಪ್ರತಿ ತಿಂಗಳು ಆದಾಯವನ್ನು ಪಡೆಯಬಹುದು. ಹೈನುಗಾರಿಕೆಯಿಂದ ವರ್ಷವಿಡೀ ಆದಾಯ ಪಡೆದು ಎಲ್ಲರೂ ಸ್ವಾವಲಂಬಿಯಾಗಿ ಸಮಾಜಕ್ಕೆ ಮಾದರಿಯಾಗಬಹುದು ಎಂದು ತಿಳಿಸಿಕೊಡುವುದೇ ಗೋಧಾಮದ ಧ್ಯೇಯವಾಗಿದೆ.

Leave a Reply

Your email address will not be published. Required fields are marked *

error: Content is protected !!