ವನಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ವನ ಬೆಳಕು
ಅಂಕೋಲ (ಉಡುಪಿ ಟೈಮ್ಸ್ ವರದಿ ):’ಶಿಕ್ಷಣ ಎನ್ನುವುದು ಬೆಳೆಯುವ ಮಕ್ಕಳಿಗೆ ತುಂಬಾ ಅಗತ್ಯ, ಶಾಲಾ ಪಠ್ಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಬೆಳವಣಿಗೆ ಪೂರಕವಾಗಿದ್ದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಆದರೆ, ಈ ಬಾರಿ ಕೊರೋನಾ ಮಹಾಮಾರಿ ಮಕ್ಕಳ ಶೈಕ್ಷಣಿಕ ಅಭ್ಯಾಸಕ್ಕೆ ಬರೆ ಹಾಕಿದಂತೆ ಮಾಡಿದೆ ಅಂದ್ರೆ ಸುಳ್ಳಲ್ಲ.
ಆದರೂ, ಕೊರೋನಾಗೆ ಸೆಡ್ಡು ಹೊಡೆಯುವಂತೆ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಆನ್‌ಲೈನ್ ಕ್ಲಾಸ್ ಎಂಬ ನೂತನ ಪ್ರಯೋಗದ ಮೂಲಕ ಮನೆಗಳಲ್ಲಿ ಕುಳಿತು ಮಕ್ಕಳಿಗೆ ಶಾಲಾ ಪಾಠ ಕಲಿಸುವ ವ್ಯವಸ್ಥೆ ಏನೋ ಆಯಿತು… ಆದರೆ ಅದಕ್ಕೂ ನೆಟ್‌ವರ್ಕ್ ಎನ್ನುವ ಲಕ್ಷ್ಮಣ ರೇಖೆ ಅಡ್ಡಿಯಾಗಿದೆ. ಅದೆಷ್ಟೋ ಕಡೆ ನೆಟ್‌ವರ್ಕ್ ಸಮಸ್ಯೆಯಿಂದ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ ಎನ್ನುವುದನ್ನು ನಾವು ನೀವು ಒಪ್ಪಿಕೊಳ್ಳಲೇ ಬೇಕು.
ಈ ನಿಟ್ಟಿನಲ್ಲಿ ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಸಹ್ಯಾದ್ರಿ ಸಂಚಯ ಸಂಸ್ಥೆ ಮುಂದೆ ಬಂದಿದೆ. ಪರಿಸರ ಪ್ರೇಮಿ ಅನಿವಾಸಿ ಭಾರತೀಯ ವಾಸುದೇವ ಐತಾಳ್ ಅವರ ಪ್ರಾಯೋಜಕತ್ವದಲ್ಲಿ. ಸಹ್ಯಾದ್ರಿ ಸಂಚಯದ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಆನ್‌ಲೈನ್ ಕ್ಲಾಸ್ ವಂಚಿತ ಮಕ್ಕಳಿಗಾಗಿ ‘ವನಮಕ್ಕಳು’ ಪಾಠದೊಂದಿಗೆ ಆಟ ಎಂಬ ವಿಶೇಷ ಕಾರ್ಯಕ್ರಮವನ್ನು ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿ ವಿಜೇತ ಸುಕ್ರಿ ಬೊಮ್ಮನ ಗೌಡರವರು ಉದ್ಘಾಟಿಸಿದರು.
ಆನ್‌ಲೈನ್ ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ನೀಡುವ ಈ ವಿನೂತನ ಕಾರ್ಯಕ್ರಮಕ್ಕೆ ಇತ್ತೀಚಿಗೆ ಚಾಲನೆ ಸಿಕ್ಕಿದೆ. ಈ ಕಾರ್ಯಕ್ರಮ ಎರಡು ತಿಂಗಳ ಕಾಲ ಅಂದರೆ ಫೆಬ್ರವರಿ 3ರ ವರೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಹಾಗೂ ಹಾಲಕ್ಕಿ ಜನಾಂಗದ ಹಾಡಿಯಲ್ಲಿ ನಡೆಲಿದೆ.
ಉತ್ತರ ಕನ್ನಡ ಜಿಲ್ಲೆಯ 6 ತಾಲೂಕುಗಳಾದ ಅಂಕೋಲ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ, ಮತ್ತು ದಾಂಡೇಲಿ ತಾಲೂಕಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 1 ನೇ ತರಗತಿಯಿಂದ 10 ನೇ ತರಗತಿ ವರೆಗಿನ ಮಕ್ಕಳು ಭಾಗವಹಿಸಲಿದ್ದು, ತರಗತಿಗಳು ಬೆಳಿಗ್ಗೆ 9 ರಿಂದ ಸಾಯಂಕಾಲ 5 ರ ವರೆಗೆ ನಡೆಯಲಿದೆ. ಇಲ್ಲಿ ಪಠ್ಯದ ಜೊತೆಗೆ ನೃತ್ಯ, ಸಂಗೀತ, ಜಾನಪದ ಕಲೆ, ಚಿತ್ರ ಕಲೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಪರಿಸರವಾದಿ ಹಾಗು ಕಲಾವಿದ ದಿನೇಶ್ ಹೊಳ್ಳ ತಿಳಿಸಿದರು.