ರೋಗಿಗೆ ಪ್ಲೇಟ್‍ಲೆಟ್ ಗಳ ಬದಲು ಮುಸಂಬಿ ಜ್ಯೂಸ್ ನೀಡಿದ ಆಸ್ಪತ್ರೆಗೆ ಬೀಗ ಜಡಿದ ಸರಕಾರ

ಲಕ್ನೋ, ಅ.22 : ಡೆಂಗ್ಯೂ ರೋಗಿಗೆ ಪ್ಲೇಟ್‍ಲೆಟ್‍ಗಳನ್ನು ನೀಡುವ ಬದಲು ಮುಸಂಬಿ ಜ್ಯೂಸ್ ನೀಡಿದ ಆರೋಪದ ಮೇಲೆ ಉತ್ತರಪ್ರದೇಶದ ಆಸ್ಪತ್ರೆಯೊಂದಕ್ಕೆ ಸರಕಾರ ಬೀಗ ಜಡಿದಿದೆ.

ಪ್ರಕರಣಕ್ಕೆ ಸಂಬಂಧಿಸಿ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರ ಆದೇಶದಂತೆ ಪ್ರಯಾಗ್ ರಾಜ್‍ನ ಝಲ್ವಾ ಪ್ರದೇಶದಲ್ಲಿರುವ ದಿ ಗ್ಲೋಬಲ್ ಆಸ್ಪತ್ರೆಗೆ ಬೀಗ ಮುದ್ರೆ ಹಾಕಲಾಗಿದೆ. ಅಲ್ಲದೆ, ಪ್ಲೇಟ್‍ಲೆಟ್ ಪ್ಯಾಕೇಟ್‍ಗಳನ್ನು ತನಿಖೆಗೆ ರವಾನಿಸಲಾಗಿದೆ. ಅಪರಾಧ ಸಾಬೀತಾದರೆ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೆಲವು ದಿನಗಳ ಹಿಂದೆ ನಕಲಿ ಬ್ಲಡ್ ಬ್ಯಾಂಕ್ ಅನ್ನು ಬೇಧಿಸಲಾಗಿತ್ತು. ಇದೀಗ ಆಸ್ಪತ್ರೆಯ ಈ ಘಟನೆಯ ತನಿಖೆ ನಡೆಸಲು ತಂಡವನ್ನು ರೂಪಿಸಲಾಗಿದೆ ಹಾಗೂ ಕೆಲವು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮುಸಂಬಿ ಜ್ಯೂಸ್ ಅನ್ನು ಪೂರೈಸಲಾಗಿದೆಯೇ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟಗೊಳ್ಳಬೇಕಿದೆ  ಎಂದು ಐಜಿ ರಾಕೇಶ್ ಸಿಂಗ್ ಅವರು ಹೇಳಿದ್ದಾರೆ.

ಡೆಂಗ್ಯೂ ಸೋಂಕಿತನಾಗಿದ್ದ ಪ್ರದೀಪ್ ಪಾಂಡೆ ಎಂಬವರನ್ನು ಅ.17 ರಂದು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪ್ಲೇಟ್ ಲೆಟ್ ಗಳನ್ನು ಬೇರೆ ಆಸ್ಪತ್ರೆಯಿಂದ ತರಲಾಗಿತ್ತು. ರೋಗಿಗೆ ಮೂರು ಯೂನಿಟ್ ಪ್ಲೆಟಲೆಟ್‍ಗಳನ್ನು ನೀಡಿದ ಬಳಿಕ ಪ್ರತಿಕೂಲ ಪರಿಣಾಮ ಉಂಟಾಗಿದೆ. ಆದುದರಿಂದ ನಾವು ಅದನ್ನು ನಿಲ್ಲಿಸಿದೆವು” ಎಂದು ಆಸ್ಪತ್ರೆಯ ಮಾಲಕ ಸೌರಭ್ ಮಿಶ್ರಾ ಅವರು ತಿಳಿಸಿದ್ದಾರೆ.

ಪ್ರದೀಪ್ ಪಾಂಡೆ ಅವರ ಆರೋಗ್ಯ ಸ್ಥಿತಿ ತೀವ್ರಗೊಂಡ ಹಿನ್ನೆಲೆ ಅವರನ್ನು ಅನಂತರ ಇನ್ನೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರೋಗ್ಯ ತೀವ್ರ ಹದಗೆಟ್ಟು ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಅ.19ರಂದು ವ್ಯಕ್ತಿಯೋರ್ವ ಎಸ್‍ಆರ್‍ಎನ್ ಆಸ್ಪತ್ರೆಯ ಪ್ಯಾಕೆಟ್ ತೋರಿಸುತ್ತಿರುವ ಹಾಗೂ ಇದು ಪ್ಲಾಸ್ಮಾ ಬದಲು ಮುಸಂಬಿ ಜ್ಯೂಸ್ ಅನ್ನು ಒಳಗೊಂಡಿದೆ ಎಂದು ಹೇಳುತ್ತಿರುವ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.

Leave a Reply

Your email address will not be published. Required fields are marked *

error: Content is protected !!