ವ್ಯಾಪಕ ಮಳೆ : ಸಂಕಷ್ಟದಲ್ಲಿ ಸಿಲುಕಿದ ಈರುಳ್ಳಿ ಬೆಳೆಗಾರರು
ಚಿಕ್ಕಮಗಳೂರು ಅ.20 : ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆಗೆ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ತಾಲೂಕಿನ ಪ್ರಮುಖ ಬೆಳೆಯಾದ ಈರುಳ್ಳಿಯು ಭಾರೀ ಮಳೆಯಿಂದಾಗಿ ಹೊಲದಲ್ಲೇ ಕೊಳೆತು ಹೋಗುತ್ತಿದೆ.
ಈ ಬಗ್ಗೆ ತಮ್ಮ ನೋವನ್ನು ತೋಡಿಕೊಂಡಿರುವ ಕೃಷಿಕ ಬಸವರಾಜಪ್ಪ ಅವರು, `ಈ ಸಲದ ಮಳೆ ವಾಡಿಕೆಗಿಂತ ದುಪ್ಪಟ್ಟಾಯಿತು. ಆರಂಭದಲ್ಲಿಯೇ ಹೆಚ್ಚಾದ ಮಳೆ, ಈರುಳ್ಳಿ ಬೆಳವಣಿಗೆಯನ್ನು ಕುಂಠಿತಗೊಳಿಸಿತು. ಬಳಿಕ ಗಡ್ಡೆ ಹಿಗ್ಗದಂತೆ ಮಾಡಿತು. ಕಡೆಗೆ ಬಂದ ಅಲ್ಪ-ಸ್ವಲ್ಪ ಬಂದ ಮಳೆ ಈರುಳ್ಳಿಯನ್ನು ಹೊಲದಿಂದ ಹೊರತೆಗೆಯಲು, ಸ್ವಚ್ಛಗೊಳಿಸಲು, ಮಾರುಕಟ್ಟೆಗೆ ಕೊಂಡೊಯ್ಯಲು ಅಡ್ಡಿಯಾಗಿತ್ತು. ಆದ್ದರಿಂದ ಇಂದಿಗೂ ಬೆಳೆದ ಈರುಳ್ಳಿಯನ್ನು ಹೊಲದಲ್ಲಿಯೇ ಬಿಟ್ಟಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗೂ `ಈರುಳ್ಳಿ ಹೊಲದಲ್ಲಿದೆ. ಮಳೆಯಿಂದ ಗಡ್ಡೆ ಕೊಳೆಯುವ ಹಂತ ತಲುಪಿವೆ. ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಹೊಲದಲ್ಲಿಯೇ ಬಿಟ್ಟರೂ ಅದರಿಂದ ಮುಂದಿನ ಬೆಳೆಗೆ ಹಾನಿಯಾಗುತ್ತದೆ. ಕೃಷಿ ಕಾರ್ಮಿಕರನ್ನು ಕರೆಸಿ, ಗಡ್ಡೆ ಕಿತ್ತು ಹೊರಕ್ಕೆ ಹಾಕಿಸಲು ಸಾಕಷ್ಟು ಖರ್ಚು ಮಾಡಬೇಕಿದೆ’ ಎಂದು ನಾರಣಾಪುರದ ಪವನ್ ಎಂಬವರು ಹೇಳಿದ್ದಾರೆ.
ಅಲ್ಲದೆ ಈರುಳ್ಳಿ ಬೆಳೆ ಹಾಳಾಗಿದ್ದರಿಂದ ಸಾಲದ ಬಡ್ಡಿ ಕಟ್ಟಲೂ ಹಣವಿಲ್ಲದೇ ಪರದಾಡುತ್ತಿದ್ದೇವೆ’ ಎಂದು ಈರುಳ್ಳಿ ಬೆಳೆಗಾರ ಹೆಬ್ಬೂರು ಶಿವಣ್ಣ ಎಂಬವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇನ್ನು ತಾಲ್ಲೂಕಿನ ಮುಕ್ಕಾಲು ಭಾಗ ಕಪ್ಪು ಭೂಮಿ ಇದ್ದು, ಈರುಳ್ಳಿ ಬೆಳೆಗೆ ಹೇಳಿ ಮಾಡಿಸಿದಂತಿದೆ. ಸಾಧಾರಣ ಮಳೆಯಾದರೆ ಉತ್ತಮ ಇಳುವರಿ ಬರುತ್ತದೆ. ಹಾಗಾಗಿಯೇ ಶೇ 90 ಕ್ಕಿಂತ ಹೆಚ್ಚಿನ ರೈತರು ಈರುಳ್ಳಿ ಬೆಳೆಯುತ್ತಾರೆ’ ಎಂದು ಇಲ್ಲಿನ ಗೌರಾಪುರದ ಈರುಳ್ಳಿ ಬೆಳೆಗಾರ ರವಿ ಹೇಳುತ್ತಾರೆ.