ಚಿಕ್ಕಮಗಳೂರು: ಆರೆಸ್ಸೆಸ್ ಮುಖಂಡರ ಕಾರಿನ ಮೇಲೆ ನಿಂದನಾತ್ಮಕ ಬರಹ ಪ್ರಕರಣ ಆರೋಪಿಗಳ ಪತ್ತೆ
ಚಿಕ್ಕಮಗಳೂರು, ಸೆ.29 : ಕಡೂರು ಪಟ್ಟಣದಲ್ಲಿ ಇತ್ತೀಚೆಗೆ ಆರೆಸ್ಸೆಸ್ ಮುಖಂಡರೊಬ್ಬರ ಕಾರಿನ ಮೇಲೆ ನಿಂದನಾತ್ಮಕ ಬರಹಗಳನ್ನು ಗೀಚಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿ ಕಚೇರಿಯ ಪ್ರಕಟನೆ ಮೂಲಕ ಮಾಹಿತಿ ಲಭ್ಯವಾಗಿದ್ದು, ಕೃತ್ಯ ಎಸಗಿರುವುದು ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು. ಇವರು ಸೆ.24ರಂದು ರಾತ್ರಿ ಕಡೂರಿನಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮ ನೋಡಿಕೊಂಡು ವಾಪಸ್ ಮನೆಗೆ ಹೋಗುತ್ತಿದ್ದಾಗ ರಸ್ತೆ ಬದಿ ನಿಲ್ಲಿಸಿದ್ದ ಕಾರು ಚೆನ್ನಾಗಿರುವುದನ್ನು ಕಂಡು, ನಾವು ಈ ತರಹದ ಕಾರನ್ನು ಖರೀದಿಸಲು ಆಗುವುದಿಲ್ಲ. ಆಗದಿದ್ದರೂ ಪರವಾಗಿಲ್ಲ, ಇದನ್ನು ಹಾಳು ಮಾಡೋಣವೆಂದು ಈ ಕೃತ್ಯವನ್ನು ಎಸಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ತಿಳಿಸಲಾಗಿದೆ.
ಸೆ.24 ರಂದು ರಾತ್ರಿ ಕಡೂರು ಪಟ್ಟಣದ ಲಕ್ಷ್ಮೀಶ ನಗರದ ನಿವಾಸಿ ಆರೆಸ್ಸೆಸ್ ಧರ್ಮ ಜಾಗೃತಿ ಸಮಿತಿಯ ಜಿಲ್ಲಾ ಸಂಚಾಲಕ ಡಾ. ಶಶಿಧರ್ ಅವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರಗಳಲ್ಲಿ ಗಾಳಿ ಬಿಟ್ಟು, ಕಾರಿನ ಮೇಲೆ ಕಲ್ಲಿನಿಂದ ಗೀಚಿ ನಿಂದನಾತ್ಮಕ ಮತ್ತು ಕೊಲೆ ಬೆದರಿಕೆ ಪದಗಳನ್ನು ಬರೆದಿರುವ ಬಗ್ಗೆ ಸೆ.25ರಂದು ಅವರು ಕಡೂರು ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಈ ಕೃತ್ಯ ಎಸಗಿದ ಆರೋಪಿಗಳೆನ್ನಲಾದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.