ರಾಜ್ಯಾದ್ಯಂತ ಪ್ರಾಣಿಗಳ ಮೇಲೆ ಹೆಚ್ಚಿದ ದೌರ್ಜನ್ಯ- ಜೈಲು ಶಿಕ್ಷೆಯ ಎಚ್ಚರಿಕೆ ನೀಡಿದ ಪ್ರಾಣಿ ಕಲ್ಯಾಣ ಮಂಡಳಿ

ಬೆಂಗಳೂರು ಸೆ.29: ರಾಜ್ಯಾದ್ಯಂತ ಪ್ರಾಣಿಗಳ ಮೇಲೆ ದೌರ್ಜನ್ಯ ಮತ್ತು ಕ್ರೌರ್ಯಗಳು ಹೆಚ್ಚಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯು ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗುವವರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿದ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯು, ರಾಜ್ಯಾದ್ಯಂತ ಪ್ರಾಣಿಗಳ ಮೇಲೆ ದೌರ್ಜನ್ಯ ಮತ್ತು ಕ್ರೌರ್ಯಗಳು ಹೆಚ್ಚಾಗುತ್ತಿರುವ ಪ್ರಕರಣಗಳು ಸಾಮಾಜಿಕ ಜಾಲತಾಣಗಳ ಮೂಲಕ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ವರದಿಯಾಗುತ್ತಿದೆ. ಅಲ್ಲದೆ ಬೀದಿ ನಾಯಿಗಳ ಆರೈಕೆದಾರರು, ಫೀಡರ್ಸ್ ಗಳಿಗೆ ಕಿರುಕುಳ ಮತ್ತು ಅನ್ಯಾಯಕ್ಕೆ ಒಳಗಾಗುತ್ತಿರುವ ಬಗ್ಗೆ ವಿವಿಧ ದೂರುಗಳು ಕೂಡಾ ಸ್ವೀಕೃತಗೊಂಡಿವೆ. ಈ ಬಗ್ಗೆ ಇತ್ತೀಚೆಗೆ ಬೆಳಗಾವಿ, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದೆ.

ಹಾಗೂ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1960 ರ ಪ್ರಕಾರ ಪ್ರಾಣಿಗಳಿಗೆ ನೋವು, ಯಾತನೆ, ತೊಂದರೆ/ ದೌರ್ಜನ್ಯ ಮಾಡುವುದು ನಿಷಿದ್ಧ. ಬೀದಿ ನಾಯಿಗಳನ್ನು ಹೊಡೆಯುವುದು ಓಡಿಸುವುದು, ಎಸೆಯುವುದು ಮತ್ತು ಕೊಲ್ಲುವುದು ಶಿಕ್ಷಾರ್ಹ ಅಪರಾಧ. ಭಾರತೀಯ ದಂಡ ಸಂಹಿತೆ ಅನುಚ್ಛೇದ 428 ಮತ್ತು 429 ರ ಪ್ರಕಾರ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ಆದರೆ ಪ್ರಾಣಿಗಳ ಜನನ ನಿಯಂತ್ರಣ (ನಾಯಿ) ನಿಯಮ 2001 ರನ್ವಯ ಪ್ರಾಣಿ ಸಂತಾನಹರಣ ಚಿಕಿತ್ಸೆಗೆ ಒಳಪಡಿಸಿದ ನಂತರ ಲಸಿಕೆ ನೀಡಿ, ಅವುಗಳ ಮೂಲ ಸ್ಥಾನಕ್ಕೆ ಬಿಡುವುದು. ಬೀದಿ ನಾಯಿಗಳು, ಬಿಡಾಡಿ ದನಗಳಿಗೆ ಆರೈಕೆ ಮಾಡುವುದು, ಆಹಾರ ನೀಡುವುದು ಹಾಗೂ ಕರುಣೆ ತೋರುವುದು ಸಂವಿಧಾನದ ಪ್ರಕಾರ ನಾಗರಿಕರ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಲಾಗಿದೆ.

ಇದರ ಜೊತೆಗೆ ಪ್ರಾಣಿಗಳ ಮೇಲಿನ ಎಲ್ಲಾ ದೌರ್ಜನ್ಯಗಳನ್ನು ದಾಖಲೆ ಮಾಡಿ, ನಿಯಮಾನುಸಾರ ಕ್ರಮ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಿರಲು ತಿಳಿಸಿದೆ. ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ಪೊಲೀಸ್ ಕಂಟ್ರೋಲ್ ರೂಂ 112 ಅಥವಾ ಪಶುಸಂಗೋಪನಾ ಸಹಾಯವಾಣಿ ಸಂಖ್ಯೆ 8277100200 ಗೆ ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!