ಉಡುಪಿ ಜಿಲ್ಲೆಗೆ ಇಂದಿಗೆ ಇಪ್ಪತ್ತೈದರ ಹರಯ
ವಿಶೇಷ ಲೇಖನ: ವಾಸಂತಿ ಅಂಬಲಪಾಡಿ (ದೊಡ್ಡಣಗುಡ್ಡೆ)
ನವಶಕ್ತಿ,ಉತ್ಸಾಹ ತುಂಬಿ ತುಳುಕುವ ಹರಯ. ಇಪ್ಪತ್ತೈದರ ಹರಯಕ್ಕೆ ಎಷ್ಟು ಅಭಿವೃದ್ಧಿಯಾಗಬೇಕೋ ಅಷ್ಟು ಅಭಿವೃದ್ಧಿಯಾಗಿದೆ. ವರುಷ ಕಳೆದಂತೆ ಇನ್ನೂ ಅಭಿವೃದ್ಧಿಯಾಗುತ್ತಾ ಹೋಗಬಹುದು. ಕಾಯುವ ತಾಳ್ಮೆ ಬೇಕು ಅಷ್ಟೇ.
ಇಪ್ಪತ್ತೈದು ವರ್ಷಗಳ ಹಿಂದಕ್ಕೆ ನಾನು ನನ್ನ ಮನಸ್ಸನ್ನು ಓಡಿಸಿದರೆ ಸರಿಯಾದ ರಸ್ತೆಗಳಿರಲಿಲ್ಲ.ಬಸ್ಸುಗಳಂತೂ ತೀರಾ ಕಡಿಮೆ. ಯಾವುದೇ ಸವಲತ್ತುಗಳಿರಲಿಲ್ಲ. ವಾಹನಗಳ ಸಂಖ್ಯೆಯಂತೂ ತೀರಾ ಕಡಿಮೆ..ತುಂಬಿ ತುಳುಕುವ ಲೆಕ್ಕದ ಬಸ್ಸು .ತಪ್ಪಿದರೆ ಸಮಾಧಾನದಿಂದ ಯಾವುದೇ ಅಪಘಾತದದ ಭೀತಿಯಿಲ್ಲದೆ ರಸ್ತೆ ನಡುವೆಯೇ ನಡೆದುಕೊಂಡು ಹೋಗಬಹುದಿತ್ತು. ಕೆಲವೊಮ್ಮೆ ಅಂಬಲಪಾಡಿ ಬೈಪಾಸ್ ನಿಂದ ಎಂ.ಜಿ.ಎಂ ವರೆಗೂ ನಾವು ಗೆಳತಿಯರೆಲ್ಲಾ ನಡೆದುಕೊಂಡೇ ಹೋಗುತ್ತಿದ್ದೆವು.ಹಾಗೇ ಸಿಟಿ ಬಸ್ ಸ್ಟಾಂಡ್ ನಿಂದ ಮುಂದಕ್ಕೆ ಕಲ್ಸಂಕ ಸೇತುವೆ ಮಳೆಗಾಲದಲ್ಲಿ ಆ ತೋಡು ಉಕ್ಕಿ ಹರಿದು ನಮಗೆಲ್ಲಾ ರಜೆ ಸಿಗುತಿತ್ತು.ದೊಡ್ಡಣಗುಡ್ಡೆ ಗೆ ಸಂಬಂಧಿಕರ ಮನೆಗೆ ಬರುವುದಿದ್ದರೂ ಕಲ್ಸಂಕ ಮಾರ್ಗವಾಗಿ ಬರಬೇಕಿದ್ದರೆ ಬಸ್ ಚಾಲಕ ಎಷ್ಟು ಮುತುವರ್ಜಿಯಿಂದ ಜಾಗೃತೆಯಿಂದ ಬಸ್ ಬಿಡುತ್ತಿದ್ದರು ಎಂದು ಯೋಚನೆ ಮಾಡಿದರೆ ಆಶ್ಚರ್ಯವಾಗುತ್ತದೆ.ರಸ್ತೆಗೆ ಒತ್ತಿಕೊಂಡಿರುವ ಮನೆಗಳು. ಚೂರು ವಾಲಿದರೂ ಮನೆಗಳ ಮಾಡು ಗೋಡೆ ಬಸ್ಸಿಗೆ ತಾಗುವಂತಿತ್ತು.ಇಪ್ಪತ್ತೈದು ವರ್ಷಗಳ ಹಿಂದೆಯೂ ರಸ್ತೆಗಳಲ್ಲಿ ಗುಂಡಿಗಳು ಇದ್ದವು.ರಸ್ತೆಗೆ ಹಾಕಿದ್ದ ದೊಡ್ಡ ದೊಡ್ಡ ಜಲ್ಲಿ ಕಲ್ಲು ತಾಗಿ ಕಾಲು ಉಳುಕಿಸಿಕೊಂಡ ಘಟನೆ ಇನ್ನೂ ನೆನಪಲ್ಲಿದೆ.
ನಾನು ನೋಡಿದ ಅಂದಿನ ಉಡುಪಿಗೂ ಇಂದಿನ ಉಡುಪಿಗೂ ತುಂಬಾ ವ್ಯತ್ಯಾಸವನ್ನು ಕಾಣುತ್ತಿದ್ದೇನೆ. ಅಂದು ಬೆರಳೆಣಿಕೆಯಲ್ಲಿ ಶಾಲಾ ಕಾಲೇಜುಗಳಿದ್ದವು.ಇಂದು ಹೆಜ್ಜೆ ಹೆಜ್ಜೆ ಶಾಲೆ,ಕಾಲೇಜುಗಳಿವೆ.ಎಲ್ಲಾ ರೀತಿಯ ಕಾಲೇಜುಗಳಿದ್ದರೂ ಸರಕಾರಿ ವೈದ್ಯಕೀಯ ಕಾಲೇಜಿನ ಅಗತ್ಯವಿದೆ. ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಬೇಕಿದೆ.ಅದರೊಂದಿಗೆ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾತ್ರ ಸೀಟು ದೊರಕುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಇದೆ. ಏಕೆಂದರೆ ಕೆಲವೊಂದು ಯೋಜನೆಗಳು ಉಡುಪಿ ಜಿಲ್ಲೆಗೆ ಬಂದಿದ್ದು ಆ ಉದ್ಯೋಗಗಳು ಅನ್ಯ ಜಿಲ್ಲೆ , ಅನ್ಯ ರಾಜ್ಯದವರಿಗೆ ಹೋಗಿರುವ ನಿದರ್ಶನಗಳು ನಮ್ಮೆದುರು ಇರುವಾಗ ಸರಕಾರಿ ವೈದ್ಯಕೀಯ ಕಾಲೇಜು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಸ್ಥಾಪನೆಯಾಗಬೇಕಾದ ಅಗತ್ಯವಿದೆ.ಇಪ್ಪತ್ತೈದರ ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಉಡುಪಿ ಎಲ್ಲಾ ವಿಧದಲ್ಲೂ ಬೆಳೆಯಲಿ.ಬೆಳೆಯಬೇಕಾದರೆ ಮೊದಲು ಒಗ್ಗಟ್ಟು ಮತ್ತು ಒಮ್ಮನಸ್ಸಿನ ಅಗತ್ಯವೂ ಇದೆ.