ವಿದೇಶದಲ್ಲಿ ತನ್ನ ಕಾರ್ಯದ ಮೂಲಕ ಮೆಚ್ಚುಗೆ ಗಳಿಸಿದ ಭಾರತೀಯ

ವಾಷಿಂಗ್ಟನ್ ಜೂ.14 : ತಾನು ಖರೀದಿಸಿದಕ್ಕಿಂತ ಕಡಿಮೆ ಬೆಲೆಗೆ ಇಂಧನ ಅನಿಲವನ್ನು ತನ್ನ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ವಿದೇಶಿ ನೆಲದಲ್ಲಿ ಭಾರತೀಯ ಮೂಲದ ಸಿಕ್ ವ್ಯಕ್ತಿಯೊಬ್ಬರು ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

ಜಗತ್ತಿನಾದ್ಯಂತ ಇಂಧನ ಬೆಲೆಗಳು ಗಗನಕ್ಕೇರಿರುವ ಈ ಅವಧಿಯಲ್ಲಿ ಅಮೇರಿಕಾದಲ್ಲಿ ಫೀನಿಕ್ಸ್‍ನಲ್ಲಿರುವ ಗ್ಯಾಸ್ ಸ್ಟೇಶನ್ ಮಾಲೀಕ ಜಸ್ವೀಂದ್ರ ಸಿಂಗ್ ಅವರು ತಾವು ಖರೀದಿಸಿದ ಬೆಲೆಗಿಂತ ಕಡಿಮೆ ದರದಲ್ಲಿ ಇಂಧನವನ್ನು ಮಾರಾಟ ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಹೀರೋ ಆಗಿದ್ದಾರೆ. ಆದರೆ ತಮ್ಮ ಈ ಕಾರ್ಯದಿಂದ ಅವರು ಪ್ರತಿ ದಿನ ಸುಮಾರು 500 ಡಾಲರ್ ಕಳೆದುಕೊಳ್ಳುತ್ತಿದ್ದಾರೆ.

ಪ್ರತಿ ಗ್ಯಾಲನ್‍ಗೆ $5.19 ರಂತೆ ಜಸ್ವೀಂದ್ರ ಸಿಂಗ್ ಮಾರಾಟ ಮಾಡುತ್ತಿದ್ದು, ಅವರು ಅದಕ್ಕಿಂತ 47 ಸೆಂಟ್ಸ್ ಹೆಚ್ಚು ಹಣ ಪಾವತಿಸಿ ಅನಿಲವನ್ನು ಕೊಳ್ಳುತ್ತಿದ್ದಾರೆ, ಮತ್ತು ಪ್ರತಿದಿನ ಸುಮಾರು 3,785 ಲೀಟರ್ ಗ್ಯಾಸ್ ಮಾರಾಟ ಮಾಡುತ್ತಾರೆ ಎಂದು ಮಾಧ್ಯಮವೊಂದು ವರದಿಮಾಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡುವ ಜಸ್ವೀಂದ್ರ ಸಿಂಗ್ ಅವರು “ಸದ್ಯಕ್ಕೆ ಜನರ ಬಳಿ ಹಣವಿಲ್ಲ. ನಮ್ಮ ಬಳಿ ಏನಾದರೂ ಇದ್ದರೆ ಸಹಾಯ ಮಾಡಲು ನನ್ನ ತಾಯಿ, ತಂದೆ ನಮಗೆ ಕಲಿಸಿದರು. ಹಾಗಾಗಿ ಕಡಿಮೆ ಬೆಲೆಗೆ ಗ್ಯಾಸ್ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ” ಹಾಗೂ ಇದರಿಂದ ತಮಗೆ ನಷ್ಟವಾಗುತ್ತಿದ್ದರೂ ಅದು ಪರವಾಗಿಲ್ಲ “ದೇವರು ಸಹಾಯ ಮಾಡುತ್ತಿದ್ದಾನೆ”. ಹಣ ಸಂಪಾದನೆಗಿಂತ ಹೆಚ್ಚು ಜನರಿಗೆ ಸಹಾಯ ಮಾಡಲು ಬಯಸುತ್ತಿದ್ದು, ಹಾಗೆ ಮಾಡುವುದರಿಂದ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.

ಆದರೆ, ಈ ರೀತಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಕ್ರಮದಿಂದಾಗಿ ಉಂಟಾಗುವ ನಷ್ಟವನ್ನು ಸರಿದೂಗಿಸಲು ಸಿಂಗ್ ಮತ್ತು ಅವರ ಪತ್ನಿ ಅಧಿಕಾವಧಿ ಕೆಲಸ ಮಾಡಬೇಕಾಗಿ ಬಂದಿದೆ. ಮಾರ್ಚ್ ತಿಂಗಳಲ್ಲಿ, ಅವರ ಮಾರಾಟದ ಬೆಲೆಯು ಖರೀದಿಯ ವೆಚ್ಚಕ್ಕಿಂತ 10 ಸೆಂಟ್ಸ್ ಮಾತ್ರ ಕಡಿಮೆಯಿತ್ತು. ಅದೀಗ 47 ಸೆಂಟ್ಸ್ ವರೆಗೆ ತಲುಪಿದೆ ಎಂದು ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ.

ಇದೀಗ ಇವರ ಈ ಕಾರ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಬಾರೀ ಪ್ರಶಂಸೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!