ಉಡುಪಿ:ಗೃಹ ಸಚಿವರಿಗೆ ಧಿಕ್ಕಾರ ಕೂಗಿದ ಕಾರ್ಮಿಕರು
ಉಡುಪಿ: ಜಿಲ್ಲೆಯಲ್ಲಿ ಮರಳಿಗಾಗಿ ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ರಾಜ್ಯ ಗೃಹ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧಿಕ್ಕಾರ ಕೂಗಿದ ಘಟನೆ ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಛೇರಿಯ ಬಳಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಸವರಾಜ್ ಬೊಮ್ಮಯಿ ಜಿಲ್ಲೆಗೆ ಪ್ರಥಮ ಭೇಟಿಯಾದ ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಪ್ರವಾಸೋದ್ಯಮ ಮತ್ತು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಸಭೆಯನ್ನು ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಕರೆದಿದ್ದರು.
ಬೆಳಗ್ಗೆ 10.45 ಕ್ಕೆ ಸಭೆಗೆಂದು ಸಚಿವರು ಹೋಗುವಾಗ ಪ್ರತಿಭಟನಾಕಾರರು ಘೋಷಣೆ ಕೂಗಿದ್ದರು. ಮಧ್ಯಾಹ್ನ 2.30 ಕ್ಕೆ ಸಭೆ ಮುಗಿಸಿ ಹಿಂದಕ್ಕೆ ತೆರಳುವಾಗ ಸಚಿವರು ಪ್ರತಿಭಟನಾಕಾರರ ಮನವಿ ಆಲಿಸುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಕಟ್ಟಡ ಕಾರ್ಮಿಕರ ಸಂಘದ 5 ಮುಖಂಡರು ಮಾತ್ರ ಬಂದು ಮನವಿ ನೀಡಿ ಎಂದು ಪೊಲೀಸರು ಹೇಳಿದ್ದಕ್ಕೆ ಕಾರ್ಮಿಕರು ಅಸಮಾಧಾನಗೊಂಡರು. ಪ್ರತಿಭಟನಾಕಾರರು ನಾವು ಇಲ್ಲಿ ಕಳೆದ ಐದು ದಿನಗಳಿಂದ ಮರಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ, ನಾವಿದ್ದಲ್ಲಿಗೆ ಬಂದು ಮನವಿ ಸ್ವೀಕರಿಸುವುದಾಗಿ ಹೇಳಿದ ಸಚಿವರು ನಮ್ಮ ಮನವಿ ಆಲಿಸಲು ಬರುವುದಿಲ್ಲವೆಂದು ತಿಳಿದು ಉದ್ವೇಗಕ್ಕೆ ಒಳಗಾದರು.
ಜಿಲ್ಲಾಧಿಕಾರಿಗಳ ಕಛೇರಿಯಿಂದ ಗೃಹ ಸಚಿವರ ವಾಹನ ಹೊರ ಹೋಗುವಷ್ಟರಲ್ಲಿ ಪ್ರತಿಭಟನಾಕಾರರು ಮುಖ್ಯ ರಸ್ತೆಗೆ ಬಂದು ಜೋರಾಗಿ ಧಿಕ್ಕಾರದ ಹಾಕಲು ಪ್ರಾರಂಭಿಸಿದರು. ನಂತರ ಕಾರಿನಿಂದ ಇಳಿದ ಸಚಿವರು ಪ್ರತಿಭಟನಾಕಾರರಲ್ಲಿ ತಾವು ಘೋಷಣೆ ಕೂಗುವುದಾದರೆ ಸಚಿವರಲ್ಲಿ ತಮ್ಮ ಮನವಿ ಆಲಿಸಲು ಬಿಡಲ್ಲ ಮತ್ತು ತಾವು ಇಲ್ಲಿಂದ ನಿರ್ಗಮಿಸುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಹೇಳಿದರು.ಈ ಹೇಳಿಕೆಯಿಂದ ಮತ್ತಷ್ಟು ಆಕ್ರೋಶಗೊಂಡ ಕಾರ್ಮಿಕರು ಮತ್ತು ಜನಪ್ರತಿನಿಧಿಗಳ ವಿರುದ್ಧ ಮಾತಿನಚಕಮಕಿ ನಡೆಯಿತು.
ತಕ್ಷಣ ಮಧ್ಯ ಪ್ರವೇಶಿಸಿದ ಶಾಸಕ ರಘುಪತಿ ಭಟ್ ತಮ್ಮ ಪಕ್ಷದ ಮುಖಂಡರನ್ನು ಸಮಾಧಾನಪಡಿಸಿ ಸಚಿವರನ್ನು ಪ್ರತಿಭಟನಾಕಾರರ ಮನವಿ ಆಲಿಸುವಂತೆ ಸತ್ಯಾಗ್ರಹ ಕಟ್ಟೆಗೆ ಕರೆದುಕೊಂಡು ಹೋದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರಾದ ಬೊಮ್ಮಯಿ ಜಿಲ್ಲೆಯ ಮರಳು ಸಮಸ್ಯೆಗೆ ಪರಿಹಾರ ಸೂಚಿಸಿದ್ದು,ಈಗಾಗಲೇ ೪೨ ನಾನ್ ಸಿಆರ್‌ಝಡ್ ವ್ಯಾಪ್ತಿ ಪ್ರದೇಶದ ಮರಳುಗಾರಿಕೆ ಪ್ರಾರಂಭಿಸಲಾಗಿದೆ, ತಕ್ಷಣ ಸಿಆರ್‌ಝಡ್ ಪ್ರದೇಶದಲ್ಲೂ ಮರಳುಗಾರಿಕೆಗೆ ಕೇಂದ್ರ ,ರಾಜ್ಯದ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದೆಂದು ಈ ಸಂದರ್ಭ ಹೇಳಿದರು.
ಪೂರ್ಣ ಪ್ರಮಾಣದ ಮರಳುಗಾರಿಕೆ ಜಿಲ್ಲೆಯಲ್ಲಿ15 ದಿನಗಳ ಒಳಗೆ ನಡೆಯದಿದ್ದರೆ ಮತ್ತೆ ಉಗ್ರ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಿಪಿಐಎಮ್ ಮುಖಂಡ ಬಾಲಕೃಷ್ಣ ಶೆಟ್ಟಿ ಈ ಸಂದರ್ಭ ಹೇಳಿದರು.