ಯಾರಿಂದ ಬಿಜೆಪಿಗೆ ತೊಂದರೆ ಆಗುತ್ತದೆಯೋ, ಅವರ ಮೇಲೆ ತನಿಖೆ ಅಸ್ತ್ರ ಪ್ರಯೋಗ- ಡಿಕೆಶಿ
ಕೊಪ್ಪಳ ಜೂ.27: ಇಡಿ ಬಳಸಿಕೊಂಡು ನನಗೆ ಕೊಡಬಾರದ ಕಿರುಕುಳ ಕೊಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.
ಈ ಬಗ್ಗೆ ಕೊಪ್ಪಳ ತಾಲೂಕಿನ ಬಸಾಪೂರ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರಿಂದ ಬಿಜೆಪಿಗೆ ತೊಂದರೆ ಆಗುತ್ತದೆಯೋ, ಅವರ ಮೇಲೆ ತನಿಖೆ ಅಸ್ತ್ರ ಪ್ರಯೋಗ ಮಾಡುತ್ತಿದೆ. ನಾನು, ಚಿದಂಬರಂ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹೀಗೆ ಎಲ್ಲರ ಮೇಲೆ ತನಿಖೆ ಮಾಡುತ್ತಿದ್ದಾರೆ. ಇಡಿ ಬಳಸಿ ನನಗೆ ಕೊಡಬಾರದ ಕಿರುಕುಳ ಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇವೆಲ್ಲವೂ ರಾಜಕೀಯ ಉದ್ದೇಶದಿಂದ ಹಾಕಿದ ಕೇಸ್ ಗಳಾಗಿದೆ. ಇವೆಲ್ಲವನ್ನು ನಾವು ಎದುರಿಸುತ್ತೇವೆ. ಮೇಲಿಂದ ಮೇಲೆ ನೋಟೀಸ್, ಸಮನ್ಸ್ ಕೊಡುತ್ತಿದ್ದಾರೆ. ಚುನಾವಣೆ ಸಮಯಕ್ಕೆ ತನಿಖೆ ಚುರುಕು ಮಾಡಿದ್ದಾರೆ. ದಿನವೂ ನನಗೆ, ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ನೋಟೀಸ್ ಬರುತ್ತಿವೆ. ಈ ಟೈಮ್ ನಲ್ಲಿ ನಾನು ಬ್ಯುಸಿ ಆಗಿಸಬೇಕು ಅಂತಾ ಹೀಗೆಲ್ಲ ಮಾಡುತ್ತಿದ್ದಾರೆ. ಎಲ್ಲ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿಕೆಶಿ ವಿರುದ್ದ ಬಿಜೆಪಿ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಪಾರ್ಟಿ ಸಿದ್ದಾಂತದ ಬಗ್ಗೆ ಮಾತನಾಡಲಿ. ನಾವು ನಮ್ಮ ಪಾರ್ಟಿಯಲ್ಲಿ ಎಲ್ಲಾ ಸಮುದಾಯಗಳಿಗೆ ಅವಕಾಶ ಕೊಟ್ಟಿದ್ದೇವೆ. ಬ್ರಾಹ್ಮಣ, ಹಿಂದುಳಿದ, ದಲಿತ ವರ್ಗದವರಿಗೆ ಕಾಂಗ್ರೆಸ್ ಅವಕಾಶ ಕೊಟ್ಟಿದೆ. ರಾಜಕಾರಣದಲ್ಲಿ ಏನು ಬೇಕಾದರೂ ನಮ್ಮ ಪಾರ್ಟಿಯಲ್ಲಿ ಸಾಧ್ಯವಾಗುತ್ತದೆ. ಬಿಜೆಪಿಯವರು ತಮ್ಮ ಮುಖವಾಡವನ್ನು ಜನರ ಮುಂದೆ ಇಡಲಿ. ಅವರ ಸಿದ್ಧಾಂತ ತತ್ವಗಳನ್ನು ಜನರಿಗೆ ತಿಳಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ಪಥನ ವಿಚಾರವಾಗಿ ಮಾತನಾಡಿದ ಅವರು, ಇವೆಲ್ಲ ಬಿಜೆಪಿಯ ನಾಟಕ. ಬಿಜೆಪಿಗರೇ ಮಾಡುತ್ತಿದ್ದಾರೆ. ಈ ಹಿಂದೆಯೇ ಮುರುಗೇಶ್ ನಿರಾಣಿ ಸರ್ಕಾರ ಮಾಡುತ್ತೇವೆ ಎಂದು ಹೇಳಿದ್ದಾಗಿ ಅವರು ತಿಳಿಸಿದರು.