ಸಿದ್ದರಾಮಯ್ಯ, ಡಿಕೆಶಿ ದಲಿತ ಪರವೋ ಅಥವಾ ಭಯೋತ್ಪಾದಕರ ಪರವೋ: ಕಟೀಲ್ ಪ್ರಶ್ನೆ

ಕೊಪ್ಪಳ: ಬೆಂಗಳೂರು ಗಲಭೆ ಪೂರ್ವ ಯೋಜಿತ ಕೃತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಪೋಸ್ಟ್ ಮಾಡಿದ್ದಕ್ಕೆ ನನ್ನ ವಿರೋಧ ಇದೆ. ಪೋಸ್ಟ್ ಹಾಕಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಪೋಸ್ಟ್ ನೆಪದ ಹಿನ್ನೆಲೆಯಲ್ಲಿ ಗಲಭೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಕಟೀಲ್, ಏಕಾಏಕಿ ಜನರು ಹೇಗೆ ಸೇರಿದರು, ಪೆಟ್ರೋಲ್ ಬಾಂಬ್‍ಗಳು, ಕಲ್ಲುಗಳು ಎಲ್ಲಿಂದ ಬಂದವು ಎಂದರು.

ಈ ಗಲಭೆಯಲ್ಲಿ ಎಸ್‍ಡಿಪಿಐ, ಕೆಎಫ್‍ಡಿ ಸಂಘಟನೆಯ ಕೈವಾಡ ಇದೆ ಎನ್ನುವ ಮಾತುಗಳಿದ್ದು, ಇವುಗಳನ್ನು ನಿಷೇಧ ಮಾಡಬೇಕು. ಜೊತೆಗೆ ಇದರ ಹಿಂದೆ ಯಾರ್ಯಾರು ಇದ್ದಾರೆ ತನಿಖೆ ಆಗಬೇಕೆಂದರು. ಬೆಂಗಳೂರು ಗಲಭೆ ಪ್ರಕರಣದಲ್ಲಿ ಸರ್ಕಾರ ದೃಢವಾದ ನಿರ್ಧಾರ ತೆಗೆದುಕೊಂಡಿದ್ದು, ಸರಕಾರಕ್ಕೆ, ಸಿಎಂ, ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಟ್ವೀಟ್‍ನಲ್ಲಿ ಹಿಂದೂಗಳ ಕುರಿತು ಪ್ರಸ್ತಾಪಿಸಿದ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಸಿದ್ದರಾಮಣ್ಣನಿಂದ ಹೆಚ್ಚು ನೀರಿಕ್ಷೆ ಮಾಡಲು ಆಗಲ್ಲ. ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮಾತ್ರ ಇದ್ದರು. ಆದರೆ ಮುಖ್ಯಮಂತ್ರಿವಾಗಿ ವರ್ತನೆ ಮಾಡಲಿಲ್ಲ. ಅಧಿಕಾರದಲ್ಲಿ ಇದ್ದಾಗ ಗಲಭೆಗಳು ಆದಾಗ ಕಠಿಣ ಕ್ರಮ ತೆಗೆದುಕೊಂಡಿದ್ದರೆ ಇವತ್ತು ಇದು ನಡೆಯುತ್ತಿರಲಿಲ್ಲ. 21 ಹಿಂದೂ ಕಾರ್ಯಕರ್ತರ ಹತ್ಯೆ ಆದಾಗ ಕ್ರಮ ತಗೆದುಕೊಳ್ಳಲಿಲ್ಲ. ಎಸ್‍ಡಿಪಿಐ, ಸಿಮಿ ಸಂಘಟನೆಯವರ ಮೇಲಿನ ಕೇಸ್ ಗಳಿಗೆ ಬಿ ರಿಪೋರ್ಟ್ ಹಾಕಿದರು. ಇದರಿಂದ ಅವರಿಗೆ ಧೈರ್ಯ ಬಂತು, ಆ ಧೈರ್ಯವೇ ಇವತ್ತು ಇದನ್ನು ಮಾಡಿಸುತ್ತಿದೆ ಎಂದು ಗುಡುಗಿದರು.

ಈ ವಿಚಾರದಲ್ಲಿ ಸಿದ್ದರಾಮಯ್ಯ ಮೌನವಾಗಿರಬೇಕಾಗಿದೆ. ಇದರ ಹಿಂದೆ ಅವರದ್ದೆ ಶಕ್ತಿ ಇದೆ. ಈ ಘಟನೆಗೆ ಸಿದ್ದರಾಮಯ್ಯ ನೇರ ಕಾರಣ ಎಂದು ನಾನು ಹೇಳಲ್ಲ. ಆದರೆ ಸಿದ್ದರಾಮಯ್ಯ ಸರಿಯಾಗಿ ಆಡಳಿತ ನೀಡದಿರುವುದು, ಅಂದು ಕಠಿಣ ಕ್ರಮ ತೆಗೆದು ಕೊಳ್ಳದಿರುವುದು, ಈ ಜನರಿಗೆ ಧೈರ್ಯ ಬಂದಿದೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮತಕ್ಕಾಗಿ ಓಲೈಕೆ ರಾಜಕಾರಣ ಮಾಡಿದ್ದು, ಪಾದರಾಯನಪುರ ಗಲಭೆ ಆದಾಗ ಜಮೀರ್ ಅಹಮ್ಮದ್ ಮೆರವಣಿಗೆ ಮಾಡಿದರು. ಡಿಜೆ ಹಳ್ಳಿ ಗಲಭೆಯಲ್ಲಿ ಸತ್ತವರನ್ನು ಅಮಾಯಕರು ಅಂತಾರೆ ಎಂದು ಆರೋಪಿಸಿದರು.

ಡಿ ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು, ನವೀನ್ ಯಾವ ಪಾರ್ಟಿ ಎಂದು ಪ್ರಶ್ನಿಸಿದ ನಳಿನ್ ಕುಮಾರ್, ನವೀನ್ ಕಾಂಗ್ರೆಸ್ ಪಕ್ಷದವನು ಎನ್ನುವುದಕ್ಕೆ ನಮ್ಮ ಬಳಿ ಪೂರ್ತಿಯಾದ ದಾಖಲೆಗಳಿದ್ದು, ಪೊಲೀಸ್ ಠಾಣೆ, ವಾಹನಗಳಿಗೆ ಬೆಂಕಿ ಹಾಕಿದವರು ಯಾರು? ಸಾರ್ವಜನಿಕರಿಗೆ ಭಯ ಸೃಷ್ಟಿಸಿದವರು ಏನೆಂದರು. ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದು, ಭಯವನ್ನು ಸೃಷ್ಟಿ ಮಾಡುವವನು ಭಯೋತ್ಪಾದಕ, ಭಯೋತ್ಪಾದಕರಿಗೆ ಬೆಂಗಾವಲಾಗಿ ನಿಲ್ಲುತ್ತಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದ ಕಟೀಲ್, ಶಾಸಕರು ದಲಿತ ಸಮುದಾಯಕ್ಕೆ ಸೇರಿದವರು, ನೀವು ದಲಿತರ ಪರವಾ ಅಥವಾ ಭಯೋತ್ಪಾದಕರ ಪರವಾ ಎನ್ನುವುದಕ್ಕೆ ಸಿದ್ದರಾಮಯ್ಯ, ಡಿಕೆಶಿ ಉತ್ತರಿಸಬೇಕೆಂದರು.

ಸತ್ತವರನ್ನು, ಗಲಭೆ ಮಾಡಿದವರನ್ನು ಅಮಾಯಕರು ಅಂತ ಯಾಕೆ ಹೇಳ್ತೀರಾ? ಯಾವುದೇ ಸಮಾಜಕ್ಕೆ, ದೇವರ ನಂಬಿಕೆಗಳಿಗೆ ನೋವು ಮಾಡುವುದು ಧರ್ಮವಲ್ಲ. ಆರೋಪಿ ಖಲೀಂ ರಕ್ಷಣೆಗೆ ಮಾಜಿ ಸಚಿವ ಕೆಜೆ ಜಾರ್ಜ ನಿಂತಿದ್ದಾರೆ ಎನ್ನುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಯಾರು ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಅವರನ್ನು ಉಚ್ಚಾಟನೆ ಮಾಡಬೇಕು ಜೊತೆಗೆ ಎಷ್ಟೇ ದೊಡ್ಡ ಶಕ್ತಿಗಳು ಇದ್ದರೂ ಅವರನ್ನು ಬಂಧಿಸಬೇಕೆಂದು ಕಟೀಲ್ ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!