ಡಿಜೆ ಹಳ್ಳಿ ಗಲಭೆ ಪ್ರಕರಣ: 146 ಜನರ ಬಂಧನ

ಬೆಂಗಳೂರು: ಮಂಗಳವಾರ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲಿದೆ. ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿ 146 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕಳೆದ ರಾತ್ರಿ ನಡೆದ ಹಿಂಸಾಚಾರಕ್ಕೆ ಕಾರಣವಾದ ‘ಅವಹೇಳನಕಾರಿ’ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ  ಅವರ ಸೋದರಳಿಯನನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 60 ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

 ‘ಗಲಭೆಗಳಲ್ಲಿ ಹಾನಿಗೀಡಾದ ಸಾರ್ವಜನಿಕ ಆಸ್ತಿಯ ಮೌಲ್ಯವನ್ನು ಗಲಭೆಕೋರರಿಂದಲೇ ವಸೂಲಿ ಮಾಡಬೇಕು ಎಂಬ ಸುಪ್ರೀಂಕೋರ್ಟ್‌ ತೀರ್ಪಿನ ಅನ್ವಯ ಕರ್ನಾಟಕ ಸರ್ಕಾರವೂ ಕಾರ್ಯನಿರ್ವಹಿಸಲಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆ ವೇಳೆ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಿದವರನ್ನು ಸಿಸಿಟಿವಿ ಫೂಟೇಜ್ ಮತ್ತು ಪ್ರತ್ಯಕ್ಷದರ್ಶಿಗಳ ಸಾಕ್ಷಿಗಳ ಮೂಲಕ ಗುರುತಿಸಲಾಗುವುದು. ಅವರಿಂದಲೇ ನಷ್ಟವನ್ನು ವಸೂಲು ಮಾಡುತ್ತೇವೆ’ ಎಂದು ಅವರು ಘೋಷಿಸಿದರು.

‘ಯಾರೇ ಆಗಲಿ, ಸಾರ್ವಜನಿಕ ಆಸ್ತಿ ಹಾಳು ಮಾಡುವುದನ್ನು ಸಹಿಸಲು ಆಗುವುದಿಲ್ಲ. ಬೆಂಗಳೂರಿನಲ್ಲಿ ಆಗಿರುವ ಪೂರ್ವ ನಿಯೋಜಿತ ಗಲಭೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದರು.

‘ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯೊದಗಿದ್ದರೆ ಪೊಲೀಸರಿಗೆ ದೂರು ನೀಡಬೇಕಿತ್ತು. ಅದು ಬಿಟ್ಟು ಹೀಗೆ ಕಾನೂನು ಕೈಗೆತ್ತಿಕೊಂಡು ಆಸ್ತಿಪಾಸ್ತಿ ಹಾಳು ಮಾಡುವುದು. ಮನೆಗಳಿಗೆ ಕಲ್ಲು ತೂರುವುದು ಅಕ್ಷಮ್ಯ. ಪೊಲೀಸರು ಕಠಿಣ ಕ್ರಮ ತಗೊಂಡಿದ್ದಾರೆ, ಗಲಭೆ ನಿಯಂತ್ರಿಸಿದ್ದಾರೆ. ಈ ಕುರಿತು ಗೃಹ ಸಚಿವ ಬೊಮ್ಮಾಯಿ ಅವರ ಜೊತೆಗೆ ಮಾತನಾಡಿದ್ದೇನೆ’ ಎಂದು ಅವರು ಹೇಳಿದರು.

ಧೈರ್ಯ ತುಂಬಿದ ಸ್ವಾಮೀಜಿ: ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ನಗರದಲ್ಲಿ ಭೇಟಿ ಮಾಡಿದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿ ವಿವಿಧ ಮಠಗಳ ಹಲವು ಸ್ವಾಮೀಜಿಗಳು ಧೈರ್ಯ ತುಂಬಿದರು.

ಅವಹೇಳನಕಾರಿ ಪೋಸ್ಟ್ ಹಂಚಿಕೊಂಡದ್ದಕ್ಕಾಗಿ ಆರೋಪಿ ನವೀನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಸಕರ ಸೋದರಳಿಯ ನವೀನ್ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿದ ನಂತರ ಮೂರ್ತಿ ಅವರ ಮನೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು

Leave a Reply

Your email address will not be published. Required fields are marked *

error: Content is protected !!