ರಸ್ತೆ ಸರಿಯಾಗಲು ಪ್ರಧಾನಿ ಮತ್ತು ರಾಷ್ಟ್ರಪತಿ ಆಗಾಗ್ಗೆ ಬೆಂಗಳೂರಿಗೆ ಭೇಟಿ ನೀಡಬೇಕೇ?- ಬಿಬಿಎಂಪಿಗೆ ಹೈಕೋರ್ಟ್ ತಪರಾಕಿ
ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗಬೇಕು ಎಂದರೆ ಪ್ರಧಾನಿ ಮತ್ತು ರಾಷ್ಟ್ರಪತಿ ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಿರಬೇಕು’ ಎಂದು ಹೈಕೋರ್ಟ್ ತಪರಾಕಿ ಹಾಕಿದೆ.
ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿನ ಕೆಲ ನಿವೇಶನಗಳಿಗೆ ಒಳಚರಂಡಿ, ಕುಡಿಯುವ ನೀರಿನ ಸಂಪರ್ಕ ಮತ್ತು ರಸ್ತೆ ಸೌಲಭ್ಯ ಕಲ್ಪಿಸಿಲ್ಲ’ ಎಂದು ಆಕ್ಷೇಪಿಸಿ ಪಿ.ಮಂಜುಳಾ ಮತ್ತು ಶಾರದಮ್ಮ ಎಂಬುವರು ಬಿಡಿಎ ಅಧಿಕಾರಿಗಳ ವಿರುದ್ಧ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಮೊನ್ನೆಯಷ್ಟೇ ಪ್ರಧಾನಿ ಬಂದು ಹೋಗಿದ್ದಾರೆ. ಅದಕ್ಕಾಗಿ 23 ರು. ಕೋಟಿ ಖರ್ಚು ಮಾಡಿ ನಗರದ ಗುಂಡಿಗಳನ್ನು ಮುಚ್ಚಲಾಗಿದೆ. ಇದನ್ನು ಗಮನಿಸಿದರೆ ಪ್ರಧಾನಿ ನಗರದ ಬೇರೆ ಬೇರೆ ಮಾರ್ಗಗಳಲ್ಲಿ ಆಗಾಗ್ಗೆ ಸಂಚರಿಸಬೇಕು. ಆಗ ಅವರನ್ನು ಮೆಚ್ಚಿಸುವ ಸಲುವಾಗಿಯಾದರೂ ಅಧಿಕಾರಿಗಳು ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಬಹುದು‘ಎಂದು ನ್ಯಾಯಪೀಠ ಬಿಡಿಎ ಕಾರ್ಯವೈಖರಿಯನ್ನು ಕುಟುಕಿತು. ಅ.21, 2020 ರಂದು, ಕರ್ನಾಟಕ ಹೈಕೋರ್ಟ್ ನ ಏಕಸದಸ್ಯ ಪೀಠವು ಎರಡು ತಿಂಗಳೊಳಗೆ ವಿಶ್ವೇಶ್ವರಯ್ಯ ಬಡಾವಣೆಯಲ್ಲಿನ ಎರಡು ಸೈಟ್ಗಳಿಗೆ ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕವನ್ನು ಕಲ್ಪಿಸುವಂತೆ ನಾಗರಿಕ ಸಂಸ್ಥೆಗಳಿಗೆ ಆದೇಶಿಸಿ ಪ್ರಕರಣವನ್ನು ವಿಲೇವಾರಿ ಮಾಡಿತ್ತು.
ಹಿಂದಿನ ಹೈಕೋರ್ಟ್ ಆದೇಶವನ್ನು ಪಾಲಿಸದ ಕಾರಣ ಇಬ್ಬರು ಮಹಿಳೆಯರು ಒಂದು ವರ್ಷದ ನಂತರ ಬಿಡಿಎ ಆಯುಕ್ತರು ಮತ್ತು ಬಿಡಬ್ಲ್ಯೂಎಸ್ ಎಸ್ ಬಿ ಸಂಬಂಧಪಟ್ಟ ಇಂಜಿನಿಯರ್ಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯೊಂದಿಗೆ ಹೈಕೋರ್ಟ್ ಸಂಪರ್ಕಿಸಿದ್ದರು. ನಾಗರಿಕ ಸಂಸ್ಥೆಗಳು ತಮ್ಮ ಕಾರ್ಯವನ್ನು ಸರಿಯಾಗಿ ನಿಭಾಯಿಸಲು ಪ್ರಧಾನಿ ಮತ್ತು ರಾಷ್ಟ್ರಪತಿಗಳು ಆಗಾಗ್ಗೆ ಬೆಂಗಳೂರಿಗೆ ಭೇಟಿ ನೀಡಿದರೆ ಬಹುಶಃ ರಸ್ತೆಗಳ ಸ್ಥಿತಿ ಸುಧಾರಿಸುತ್ತದೆ. ಕಳೆದ ವಾರ ನೀವು ಗುಂಡಿಗಳನ್ನು ತುಂಬಲು 23 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೀರಿ. ನಿಮ್ಮ ಕೆಲಸವನ್ನು ಮಾಡಲು ಪ್ರಧಾನಿ ಪ್ರತಿ ಬಾರಿ ಬೇರೆ ಬೇರೆ ರಸ್ತೆಗಳಲ್ಲಿ ಪ್ರಯಾಣಿಸಬೇಕು ಎಂದು ಹೈಕೋರ್ಟ್ ಕಿಡಿಕಾರಿದೆ.