ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ- ಸೆ.14 ರಿಂದ ಹೊಸ ಅಂತಾರಾಷ್ಟ್ರೀಯ ಮಾರ್ಗ ಆರಂಭ

ಬೆಂಗಳೂರು ಜೂ.22 : ಈ ವರ್ಷ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹೊಸ ಅಂತಾರಾಷ್ಟ್ರೀಯ ಮಾರ್ಗಗಳನ್ನು ಆರಂಭಿಸಲಿದೆ. ಈ ಬಗ್ಗೆ ಎಂದು ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (BIAL)ಮಾಹಿತಿ ನೀಡಿದ್ದು, ಇನ್ನು ಮುಂದೆ ಬೆಂಗಳೂರು ಏರ್ ಪೋರ್ಟ್ ನಿಂದ ಸಿಡ್ನಿ, ಸ್ಯಾನ್ ಫ್ರಾನ್ಸಿಸ್ಕೋ, ಟೆಲ್ ಅವಿವ್, ಸಿಯಾಟಲ್ ಮತ್ತು ವಿಶ್ವದ ಇತರ ಭಾಗಗಳಿಗೆ ವಿಮಾನಗಳು ಸಂಚರಿಸಲಿವೆ.

ಕ್ವಾಂಟಾಸ್ ನ ನಾಲ್ಕು ವೀಕ್ಲಿ ವಿಮಾನಗಳು ಈ ವರ್ಷದ ಸೆಪ್ಟೆಂಬರ್ 14 ರಿಂದ ಸಿಡ್ನಿಗೆ ಹಾರಾಟ ಪ್ರಾರಂಭಿಸಲಿದೆ. ಯುನೈಟೆಡ್ ಏರ್‍ಲೈನ್ಸ್ ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಸ್ಯಾನ್ ಫ್ರಾನ್ಸಿಸ್ಕೋಗೆ ತನ್ನ ದೈನಂದಿನ ವಿಮಾನಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಇದಲ್ಲದೆ, ಏರ್ ಇಂಡಿಯಾದಿಂದ ಟೆಲ್ ಅವೀವ್‍ಗೆ ವಾರಕ್ಕೊಮ್ಮೆ ಎರಡು ವಿಮಾನಗಳು ಮತ್ತು ಅಮೇರಿಕನ್ ಏರ್ ಲೈನ್ಸ್ ನಿಂದ ಸಿಯಾಟಲ್ ಗೆ ದೈನಂದಿನ ವಿಮಾನಗಳನ್ನು ಸಹ ಪ್ಲಾನ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ಹೇಳಿದ್ದಾರೆ. ಇಥಿಯೋಪಿಯನ್ ಏರ್‍ಲೈನ್ಸ್‍ನಿಂದ ಸಂಪರ್ಕಗೊಂಡಿರುವ ಅಡಿಸ್ ಅಬಾಬಾ, KLMನಿಂದ ಆಮ್‍ಸ್ಟರ್‍ಡ್ಯಾಮ್ ಮತ್ತು ಜಪಾನ್ ಏರ್‍ಲೈನ್ಸ್‍ನಿಂದ ಟೋಕಿಯೊ ನರಿಟಾ ಸಂಚಾರವನ್ನು ಮರುಪ್ರಾರಂಭಿಸಲಾಗಿದೆ.

ಜಪಾನ್ ಏರ್‍ಲೈನ್ಸ್ ಟೋಕಿಯೊ ನರಿಟಾಗೆ ವಾರಕ್ಕೆ ಮೂರು ಬಾರಿ ಹಾರಾಟ ನಡೆಸಲಿದೆ. ಇದು ಆಗಸ್ಟ್ 2022ರಿಂದ ಜಾರಿಗೆ ಬರುತ್ತದೆ. ಜುಲೈ 2022ರಿಂದ ಪ್ರಾರಂಭವಾಗುವ ಬೆಂಗಳೂರು-ಆಮ್ಸ್ಟರ್‍ಡ್ಯಾಮ್ ಮಾರ್ಗದಲ್ಲಿ ವಾರಕ್ಕೆ ಮೂರರಿಂದ ನಾಲ್ಕು ಬಾರಿ ಪ್ರಯಾಣವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಬಿಐಎಎಲ್ ವಕ್ತಾರರು ತಿಳಿಸಿದ್ದಾರೆ.

ಪ್ರಸ್ತುತ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿಮಾನಯಾನ ಸಂಸ್ಥೆಗಳು FY23ರ ಎರಡನೇ ತ್ರೈಮಾಸಿಕದ ವೇಳೆಗೆ ತಮ್ಮ ಅಂತಾರಾಷ್ಟ್ರೀಯ ನಾನ್ ಸ್ಟಾಪ್ ಡೆಸ್ಟಿನೇಷನ್ ಅನ್ನು ಪುನರಾರಂಭಿಸುವ ನಿರೀಕ್ಷೆಯಿದೆ ಎಂದು BIAL ನ ವಕ್ತಾರರು ತಿಳಿಸಿದ್ದಾರೆ. ಇದೀಗ ಬೆಂಗಳೂರು ವಿಮಾನ ನಿಲ್ದಾಣವು 23 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸೇವೆ ಪೂರೈಸುತ್ತಿದೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಕ್ಷಿಣ ಭಾರತದ ಎಲ್ಲಾ ವಿಮಾನ ನಿಲ್ದಾಣಗಳ ಪೈಕಿ ಅತ್ಯಧಿಕ ಅಂತಾರಾಷ್ಟ್ರೀಯ ಸಂಪರ್ಕವನ್ನು ಹೊಂದಿರುವ ಏರ್ ಪೋರ್ಟ್ ಆಗಿದೆ.

Leave a Reply

Your email address will not be published. Required fields are marked *

error: Content is protected !!