ನನ್ನನ್ನು ಬಲವಂತವಾಗಿ ಕರೆದೊಯ್ಯಲಾಗಿತ್ತು… ಶೌಚಾಲಯಕ್ಕೆಂದು ಹೇಳಿ ತಪ್ಪಿಸಿಕೊಂಡೆ… ಶಿವಸೇನಾ ಶಾಸಕ

ಹೊಸದಿಲ್ಲಿ: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಹೊಸ ತಿರುವುಗಳನ್ನು ಪಡೆಯುತ್ತಿರುವಂತೆಯೇ ಬಂಡಾಯವೆದ್ದ ಶಾಸಕರ ಗುಂಪಿನಲ್ಲಿದ್ದವರೆಂದು ತಿಳಿಯಲಾದ ಇಬ್ಬರು ಶಾಸಕರು ತಾವು ಉದ್ಧವ್‌ ಠಾಕ್ರೆ ಅವರಿಗೆ ನಿಷ್ಠರಾಗಿರುವುದಾಗಿ ಹೇಳಿದ್ದಾರಲ್ಲದೆ ತಮ್ಮನ್ನು ಬಲವಂತವಾಗಿ ಕರೆದೊಯ್ಯಲಾಗಿತ್ತು ಎಂದೂ ಹೇಳಿದ್ದಾರೆ.

ಸದ್ಯ ಗುವಹಾಟಿಯಲ್ಲಿರುವ ಏಕನಾಥ್‌ ಶಿಂಧೆ ಮತ್ತು ಅವರನ್ನು ಬೆಂಬಲಿಸುತ್ತಿದ್ದಾರೆನ್ನಲಾದ ಶಾಸಕರುಗಳ ಗುಂಪಿನಿಂದ ಇಬ್ಬರು ಶಿವಸೇನಾ ಶಾಸಕರಾದ ಕೈಲಾಶ್‌ ಪಾಟೀಲ್‌ ಮತ್ತು ನಿತಿನ್‌ ದೇಶಮುಖ್‌ ವಾಪಸಾಗಿದ್ದಾರೆ.

ʻನನ್ನನ್ನು ಬಲವಂತದಿಂದ ಸೂರತ್‌ಗೆ ಕರೆದೊಯ್ಯಲಾಗಿತ್ತು.ನಾನು ಚೆನ್ನಾಗಿದ್ದೇನೆ. ನನಗೆ ಹೃದಯಾಘಾತವಾಗಿಲ್ಲ. ನನ್ನನ್ನು ಸುಮಾರು 20-25 ಮಂದಿ ಅಪಹರಿಸಿ ಆಸ್ಪತ್ರೆಯ ಕೊಠಡಿಯೊಂದರಲ್ಲಿ ದಿಗ್ಬಂಧನದಲ್ಲಿರಿಸಿದ್ದರು. ನನಗೆ ಬಲವಂತದಿಂದ ಯಾವುದೋ ಚುಚ್ಚುಮದ್ದು ನೀಡಲಾಗಿತ್ತು. ನಾನು ಉದ್ಧವ್‌ ಠಾಕ್ರೆ ಜತೆಗಿದ್ದೇನೆ,ʼʼಎಂದು  ದೇಶಮುಖ್‌ ಹೇಳಿದ್ದಾರೆ.

ಅತ್ತ ಕೈಲಾಶ್‌ ಪಾಟೀಲ್‌ ಪ್ರತಿಕ್ರಿಯಿಸಿ ʻʻನನ್ನನ್ನು ವಾಹನವೊಂದರಲ್ಲಿ ಕೂರಿಸಿ ಮುಂಬೈ ನಗರದ ಹೊರಗೆ ಬಲವಂತವಾಗಿ ಕರೆದೊಯ್ಯಲಾಗಿತ್ತು. ದಾರಿ ಮಧ್ಯ, ವಾಹನ ಗುಜರಾತ್‌ನತ್ತ ಸಾಗುತ್ತಿದ್ದಾಗ ಏನೋ ಎಡವಟ್ಟಾಗಿದೆ ಎಂದು ತಿಳಿಯಿತು. ಶೌಚಾಲಯಕ್ಕೆ ಹೋಗಲಿದೆಯೆಂದು ಹೇಳಿ ತಪ್ಪಿಸಿಕೊಂಡೆ. ಸುಮಾರು ನಾಲ್ಕೈದು ಕಿಲೋಮೀಟರ್‌ ದೂರ ಓಡಿದೆ. ಸ್ಥಳೀಯ ಟ್ರಕ್‌ ಚಾಲಕರು ಮುಂಬೈ ತಲುಪಲು ಸಹಾಯ ಮಾಡಿದರು,ʼʼಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!