ಉಡುಪಿ: ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಶೀಘ್ರದಲ್ಲಿಯೇ ಅನುದಾನ: ಬೊಮ್ಮಾಯಿ

ಉಡುಪಿ, ಆಗಸ್ಟ್ 12: ಜಿಲ್ಲಾ ಆಸ್ಪತ್ರೆಯನ್ನು ಶೀಘ್ರದಲ್ಲಿಯೇ ಮೇಲ್ದರ್ಜೆಗೇರಿಸಿ 300 ಬೆಡ್‌ಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಅವರು ಇಂದು ನಗರದ ಕಂಟ್ರಿ ಹೋಟೆಲ್‌ನ ಸಭಾಂಗಣದಲ್ಲಿ ಜಿಲ್ಲಾಡಳಿತಕ್ಕೆ ವೆಂಟಿಲೇಟರ್ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ವೆಂಟಿಲೇಟರ್‌ಗಳನ್ನು ಹಸ್ತಾಂತರಿಸಿ ಮಾತನಾಡಿದರು.


ಉಡುಪಿಯ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಗಳು ಅನುಮೋದನೆಯನ್ನು ನೀಡಿದ್ದಾರೆ, ಅನುದಾನವು ಹಣಕಾಸು ಇಲಾಖೆಯಿಂದ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು, ಮೇಲ್ದರ್ಜೆಗೇರಿಸಿ ಶೀಘ್ರದಲ್ಲಿ ಕಾರ್ಯ ಪ್ರಾರಂಭವಾಗಲಿದೆ ಎಂದರು. ಕೊರೋನಾ ಸೋಂಕು ಹೊಂದಿ ಉಸಿರಾಟದ ಸಮಸ್ಯೆ ಇರುವ ರೋಗಿಗಳಿಗೆ ಚಿಕಿತ್ಸೆ ನೀಡಿ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಸರ್ಕಾರವು 20 ಹಾಗೂ ದಾನಿಗಳಿಂದ 10 ವೆಂಟಿಲೇಟರ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಇವುಗಳ ಬಳಕೆ ಮಾಡಿ ಚಿಕಿತ್ಸೆ ನೀಡುವುದರಿಂದ ಮರಣವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.


ಶಾಸಕ ರಘುಪತಿ ಭಟ್ ಅವರು ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ 100 ಕ್ಕೂ ಹೆಚ್ಚು ದಿನಗಳ ಕಾಲ ಆಹಾರ ಪದಾರ್ಥಗಳನ್ನು ಹಂಚಿಕೆ ಮಾಡಿದ್ದಾರೆ, ಅಲ್ಲದೇ ದಾನಿಗಳನ್ನು ಸಂಪರ್ಕಿಸಿ 10ಕ್ಕೂ ಹೆಚ್ಚು ವೆಂಟಿಲೇಟರ್‌ಗಳನ್ನು ದಾನವಾಗಿ ಪಡೆಯುವುದರೊಂದಿಗೆ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆಂದು ಅವರಿಗೆ ಅಭಿನಂದನೆ ತಿಳಿಸಿದರು.
ಸರ್ಕಾರವು ಎಲ್ಲಾ ರೀತಿಯಲ್ಲಿಯೂ ಕೂಡ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಪ್ರಯತ್ನ ನಡೆಸುತ್ತಲೇ ಇದೆ. ಇಂದು ನೀಡಿದ ವೆಂಟಿಲೇಟರ್‌ಗಳನ್ನು ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಬಳಕೆ ಮಾಡಿಕೊಳ್ಳಲಾಗುವುದು ಎಂದರು.
ಕೊರೋನಾ ಸವಾಲಿನ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತಕ್ಕೆ ವೆಂಟಿಲೇಟರ್‌ಗಳನ್ನು ದಾನವಾಗಿ ನೀಡಿದ ಡಾ.ಜಿ. ಶಂಕರ್, ಆಭರಣ ಜ್ಯುವೆಲ್ರ‍್ಸ್, ರೋಬೋ ಸಾಫ್ಟವೇರ್ ಟೆಕ್ನಾಲಜಿ ಹಾಗೂ ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಎಚ್.ಎನ್ ಶೆಟ್ಟಿಯವರಿಗೆ ಅಭಿನಂದನೆಗೈದರು.


ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾಧಿಕಾರಿ ಜಿ.
ಜಗದೀಶ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!