ಚೆನ್ನೈ, ಹೈದರಾಬಾದ್ ನಿಂದ ಮೂರು ಕೆಎಸ್ ಆರ್ ಪಿ ತಂಡ ಆಗಮನ: ಬೊಮ್ಮಾಯಿ
ಉಡುಪಿ: ಡಿಜೆಹಳ್ಳಿ, ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆ ಪೂರ್ವ ಯೋಜಿತ ಷಡ್ಯಂತ್ರ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಪರಿಸ್ಥಿತಿ ಹತೋಟಿಗೆ ಬರದಿದ್ದಾಗ ಕೊನೆಯ ಅಸ್ತ್ರವಾಗಿ ಪೊಲೀಸರು ಗೋಲಿಬಾರ್ ಮಾಡಿದ್ದಾರೆ. ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಕಲ್ಲು ತೂರಾಟದ ವೇಳೆಯಲ್ಲಿ ಪೊಲೀಸರಿಗೂ ಗಾಯಗಳಾಗಿವೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದಲ್ಲಿ ಹೆಚ್ಚು ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ ಎಂದರು.
ತಾವು ಕೇಂದ್ರ ಗೃಹ ಕಾರ್ಯದರ್ಶಿ ಅವರ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ ಬೊಮ್ಮಾಯಿ ಅವರು, ಈಗಾಗಲೇ ಗರುಡ ತಂಡ ಘಟನಾ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇನ್ನು, ಚೆನ್ನೈ, ಹೈದ್ರಾಬಾದ್ ನಿಂದ ತಲಾ ಮೂರು ಕೆಎಸ್ ಆರ್ ಪಿ ಕಂಪನಿಗಳು ಬರುತ್ತಿವೆ. ಅಲ್ಲದೇ, ರಾಪಿಡ್ ಆ್ಯಕ್ಷನ್ ಫೋರ್ಸ್ ಕೂಡ ಸ್ಥಳಕ್ಕೆ ಆಗಮಿಸಲಿದೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಿ ಗಲಭೆಗೆ ಕರೆನೀಡಲಾಗಿದ್ದು, ಸ್ಥಳೀಯರು ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾರೆ. ಇದೊಂದು ಪೂರ್ವ ಯೋಜಿತ ಷಡ್ಯಂತ್ರ ಎಂದು ಅವರು ಗಂಭೀರ ಆರೋಪ ಮಾಡಿದರು. ಈ ಮಧ್ಯೆ, ಮಂಗಳವಾರ ರಾತ್ರಿ ನಡೆದ ಗಲಭೆ ಸದ್ಯ ರಾಜಧಾನಿ ಬೆಂಗಳೂರು ಹತೋಟಿಯಲ್ಲಿದ್ದರೂ, ಮುಂಜಾಗ್ರತಾ ಕ್ರಮವಾಗಿ ನಗರದ ಡಿ ಜೆ ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈಗಾಗಲೇ ಪೋಸ್ಟ್ ಹಾಕಿದ್ದ ಆರೋಪಿ ನವೀನ್ ಸೇರಿ ಗಲಭೆಯಲ್ಲಿ ಭಾಗಿಯಾಗಿದ್ದ 110 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಲು ತೂರಾಟ, ಮನೆ-ವಾಹನಗಳಿಗೆ ಬೆಂಕಿ ಇತ್ಯಾದಿಗಳನ್ನು ಗಮನಿಸಿದಾಗ ಇದೊಂದು ಪೂರ್ವ ಯೋಜಿತವಾದ ಗಲಭೆ ಆಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹಿರಿಯ ಪೊಲೀಸ್ ಅಧಿಕಾರಿಯ ವಾಹನ ಸೇರಿ ದುಷ್ಕರ್ಮಿಗಳು 50ಕ್ಕೂ ಹೆಚ್ಚು ವಾಹನಗಳನ್ನು ಹಾನಿಗೊಳಿಸಿದ್ದಾರೆ. ಇನ್ನು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೇರಿ ಅವರ ಸಹೋದರಿ ಜಯಂತಿ ಮನೆಗೂ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದ್ದು, ವಾಹನಗಳು ಆಹುತಿಗೆ ಈಡಾಗಿವೆ. ಸದ್ಯ ರಾಜ್ಯ ಮೀಸಲು ಪೊಲೀಸ್ ಪಡೆ, ಬೆಂಗಳೂರು ನಗರ ಪೊಲೀಸ್ ಪಡೆ ಸೇರಿ ಹೆಚ್ಚುವರಿ ಪಡೆಗಳನ್ನು ಗಲಭೆ ನಡೆದ ಸ್ಥಳದಲ್ಲಿ ಭದ್ರತೆಗಾಗಿ ನಿಯೋಜನೆಗೊಳಿಸಲಾಗಿದೆ. ಅಲ್ಲದೇ, ಈ ಹಿಂದೆ ಈ ಸ್ಥಳದಲ್ಲಿ ಕೆಲಸ ಮಾಡಿದ್ದ ಹಿರಿಯ ಅಧಿಕಾರಿಗಳನ್ನು ಕರೆತರಲಾಗುತ್ತಿದೆ ಎನ್ನಲಾಗಿದೆ. ಸದ್ಯ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಚುರುಗೊಳಿಸಿದ್ದಾರೆ.