1 ಕೋಟಿಗೂ ಹೆಚ್ಚು ಹುದ್ದೆ ಖಾಲಿ: ಪ್ರಧಾನಿಯ 10 ಲಕ್ಷ ಉದ್ಯೋಗ ಭರವಸೆಗೆ ವರುಣ್ ಗಾಂಧಿ ಟಾಂಗ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯು ಮುಂದಿನ ಒಂದೂವರೆ ವರ್ಷದಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 10 ಲಕ್ಷ ಉದ್ಯೋಗ ಭರ್ತಿಮಾಡಲು “ಮಿಷನ್ ಮೋಡ್” ಘೋಷಿಸಿದ ಕೂಡಲೇ, ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಪ್ರಧಾನಿ ಮೋದಿಗೆ ಧನ್ಯವಾದ ಹೇಳುವುದರ ಜೊತೆಗೆ ಚುರುಕು ಮುಟ್ಟಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ತಮ್ಮದೇ ಪಕ್ಷ ಮತ್ತು ಸರ್ಕಾರದ ವಿರುದ್ಧ ಬಹಿರಂಗವಾಗಿ ಟೀಕಿಸುತ್ತಿರುವ ವರುಣ್ ಗಾಂಧಿ ಅವರು, 10 ಲಕ್ಷ ಉದ್ಯೋಗ ಭರ್ತಿ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಕಚೇರಿ ಪೋಸ್ಟ್‌ಗೆ ಪ್ರತಿಕ್ರಿಯಿಸುವ ಮೂಲಕ ಮತ್ತೊಮ್ಮೆ ಪಕ್ಷಕ್ಕೆ ನಯವಾದ ಮಾತುಗಳಲ್ಲೇ ಚಾಟಿ ಬೀಸಿದ್ದಾರೆ.
ನಿರುದ್ಯೋಗಿ ಯುವಕರ ನೋವು ಮತ್ತು ಭಾವನೆಗಳನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದಗಳು. ಹೊಸ ಉದ್ಯೋಗಗಳನ್ನು ಸೃಷ್ಟಿಸುವುದರೊಂದಿಗೆ 1 ಕೋಟಿಗೂ ಹೆಚ್ಚು ಮಂಜೂರಾದ ಮತ್ತು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಪ್ರತಿ ವರ್ಷ 2 ಕೋಟಿ ಉದ್ಯೋಗವಕಾಶಗಳನ್ನು ನೀಡುವ ಭರವಸೆಯನ್ನು ಪೂರ್ಣಗೊಳಿಸಲು ನಾವು ಅರ್ಥಪೂರ್ಣ ಪ್ರಯತ್ನಗಳನ್ನು ತ್ವರಿತ ಗತಿಯಲ್ಲಿ ಮಾಡಬೇಕಾಗಿದೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಮಾನವ ಸಂಪನ್ಮೂಲಗಳ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಮುಂದಿನ 1.5 ವರ್ಷಗಳಲ್ಲಿ 10 ಲಕ್ಷ ಹುದ್ದೆಗಳಿಗೆ ಮಿಷನ್ ಮೋಡ್‌ನಲ್ಲಿ ಸರ್ಕಾರದಿಂದ ನೇಮಕಾತಿ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.