ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ- ಮೋಹನ್ ಭಾಗವತ್

ನಾಗಪುರ ಜೂ.3: ಕಾಶಿ ಜ್ಞಾನವಾಪಿ ಸೇರಿದಂತೆ ದೇಶದ ವಿವಿಧ ಮಸೀದಿಗಳ ಕುರಿತು ವಿವಾದ ಎದ್ದಿರುವ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಅಚ್ಚರಿಯ ಹೇಳಿಕೆಯೊಂದು ಭಾರೀ ಸಂಚಲನ ಮೂಡಿಸಿದೆ.

ಆರ್.ಎಸ್.ಎಸ್ ತರಬೇತಿ ಶಿಬಿರದಲ್ಲಿ ನಿನ್ನೆ ಸಂಜೆ ಮಾತನಾಡಿದ ಅವರು, ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ದಿನಕ್ಕೊಂದು ಮಸೀದಿ ವಿವಾದ ಸೃಷ್ಟಿಸಬೇಕಿಲ್ಲ. ಇನ್ಮುಂದೆ ಮಂದಿರ ಹೋರಾಟದಲ್ಲಿ ನಾವಿಲ್ಲ ಎಂದು ಹೇಳಿದ್ದಾರೆ.

ಹಾಗೂ ಮುಸ್ಲಿಮರೇನು ಹೊರಗಿನವರಲ್ಲ. ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಪೂರ್ವದಲ್ಲಿ ಅವರು ಹಿಂದೂಗಳೇ ಆಗಿದ್ದರು. ಇತಿಹಾಸವನ್ನು ನಾವು ರಚನೆ ಮಾಡಿಲ್ಲ. ಇಂದಿನ ಹಿಂದೂ-ಮುಸ್ಲಿಮರೂ ರಚಿಸಿಲ್ಲ. ಭಾರತದ ಮೇಲೆ ಇಸ್ಲಾಂ ರಾಜರು ದಂಡಯಾತ್ರೆ ಕೈಗೊಂಡಾಗ ಜ್ಞಾನವಾಪಿಯಂತಹ ಘಟನೆಗಳು ನಡೆದಿವೆ. ನೂರಾರು ದೇವಸ್ಥಾನಗಳು ನಾಶವಾಗಿವೆ. ಹೀಗಾಗಿ ದಿನಕ್ಕೊಂದು ಹೊಸ ವಿವಾದವನ್ನು ಯಾಕೆ ಸೃಷ್ಟಿ ಮಾಡಬೇಕು? ಎಲ್ಲ ಮಸೀದಿಗಳಲ್ಲೂ ಯಾಕೆ ಶಿವಲಿಂಗವನ್ನು ಹುಡುಕಬೇಕು ಎಂದು ಪ್ರಶ್ನಿಸಿದರು.

ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಆರ್.ಎಸ್.ಎಸ್ ಪಾಲ್ಗೊಂಡಿತ್ತು ನಿಜ. ಕೆಲ ಐತಿಹಾಸಿಕ ಕಾರಣ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ನಾವು ಭಾಗಿಯಾಗಿದ್ದು ನಿಜ. ಆದರೆ ಇನ್ನು ಮುಂದೆ ಈ ರೀತಿಯ ಹೋರಾಟದಲ್ಲಿ ಭಾಗಿಯಾಗುವುದಿಲ್ಲ ಎಂದು ಈ ಹಿಂದೆಯೇ ಹೇಳಿದ್ದೆವು. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಜ್ಞಾನವಾಪಿ ಮಸೀದಿ ವಿಚಾರವನ್ನು ಪ್ರಸ್ತಾಪಿಸಿ, ಹಿಂದೂ ಹಾಗೂ ಮುಸ್ಲಿಮರು ಮಾತುಕತೆ ಮೂಲಕ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಆದರೆ ಇದು ಎಲ್ಲ ಸಮಯದಲ್ಲೂ ಸಾಧ್ಯವಾಗಲಾರದು. ಹೀಗಾಗಿ ಕೋರ್ಚ್‍ನಲ್ಲಾದರೂ ತೀರ್ಪು ಬಂದಾಗ ಸ್ವೀಕಾರ ಮಾಡಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!