ಕೆಳವರ್ಗದ ಯುವಕರನ್ನು ಮುಂದೆ ಇಟ್ಟುಕೊಂಡು ಹಲ್ಲೆ ನಡೆಸುತ್ತಿರುವ ಸಂಸ್ಕೃತಿ ಹೆಚ್ಚುತ್ತಿದೆ- ಚಿಂತಕ ಫಣಿರಾಜ್

ಉಡುಪಿ ಮೇ 31: ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ ಇಂದು ಸಹಬಾಳ್ವೆ ಉಡುಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.‌

ಈ ವೇಳೆ ಮಾತನಾಡಿದ ಚಿಂತಕ, ಸಹಬಾಳ್ವೆ ಸಂಘಟನೆಯ ಮುಖ್ಯಸ್ಥ ಫಣಿರಾಜ್ ಅವರು, ಒಂದು ಆಮಂತ್ರಿತ ಸಭೆಯಲ್ಲಿ ರಾಕೇಶ್ ಟಿಕಾಯತ್ ಅವರು ಸಮಾಲೋಚನೆ ಮಾಡುತ್ತಿರುವಾಗ ಯುವಕರ ತಂಡ ಅಲ್ಲಿಗೆ ನುಗ್ಗಿ ಹಲ್ಲೆ ಮಾಡುತ್ತಾರೆ ಎಂದರೆ ಇದು ಸಾಮಾನ್ಯ ವಿಷಯವಲ್ಲ. ನಿರಂತರವಾಗಿ ಮಹಿಳೆಯರ ಮೇಲೆ, ದಲಿತರ ಮೇಲೆ ಈ ಸಂಘಟನೆಗಳು ಕೆಳವರ್ಗದ ಯುವಕರನ್ನು ಮುಂದೆ ಇಟ್ಟುಕೊಂಡು ಹಲ್ಲೆ ನಡೆಸುತ್ತಿರುವ ಸಂಸ್ಕೃತಿ ದೇಶದಲ್ಲಿ ಬೆಳೆಯುತ್ತಿದೆ ಎಂದರು.

ಸರಕಾರ, ಫ್ಯಾಸಿಸ್ಟ್ ಶಕ್ತಿ ಹಾಗೂ ಆರ್.ಎಸ್.ಎಸ್ ವಿರುದ್ಧ ಯಾರು ಜನಾಂದೋಲನ ಕಟ್ಟುತ್ತಿದ್ದಾರೋ, ಹಾಗೂ ಅವರ ವಿಚಾರಗಳನ್ನು ಬೆತ್ತಲೆಗೊಳಿಸಿ ಸಂವಿಧಾನವನ್ನು ಎತ್ತಿ ಹಿಡಿಯುತ್ತಿದ್ದಾರೋ ಅಂತವರ ವಿರುದ್ಧ ಈ ರೀತಿಯ ಹಲ್ಲೆ ನಡೆಸಿ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ. ಯೂಪ್, ನಾಸಾ ಮೊದಲಾದ ಕಾಯ್ದೆ ಮೂಲಕ ಹೋರಾಟಗಾರರ ಬಾಯಿ ಮುಚ್ಚಿಸುವ ಕೆಲಸವನ್ನು ಫಾಸಿಸಮ್ ಎಂದು ಕರೆಯುತ್ತಾರೆ. ಇದು ಎರಡು ರಾಜಕೀಯ ಪಕ್ಷಗಳ‌ ರಾಜಕೀಯ ಸಿದ್ದಾಂತ ದ ಹೋರಾಟ ಎಂದು ಕರೆಯುವುದಿಲ್ಲ ಎಂದರು.

ಇವರು ಕಾನೂನಿನ ಸಹಕಾರ ಬೆಂಬಲ ನೀಡುವ ಆಸೆ ತೋರಿಸಿ ಯುವಕರಿಂದ ಈ ರೀತಿಯ ಹಲ್ಲೆ ಕೃತ್ಯಗಳನ್ನು ಮಾಡಿಸುವ ಉದ್ಯೋಗ ಮಾಡುತ್ತಿದ್ದಾರೆ. ಗುಜರಾತ್ ನಿಂದ ಆರಂಭವಾದ ಇಂತಹ ಕಾರ್ಯಕ್ರಮ ಇಂದು ಕರ್ನಾಟಕದಲ್ಲಿ ಒಂದು ವೈಯಕ್ತಿಕ ಸಭೆಗೆ ಹೋಗಿ ಹಲ್ಲೆ ನಡೆಸುವ ಮಟ್ಟಿಗೆ ಹೆಚ್ಚಾಗಿದೆ. ಇದು ಮುಂದಿನ ದಿನಗಳಲ್ಲಿ ನಮ್ಮ ಈ ರೀತಿಯ ಪ್ರತಿಭಟನಾ ಸಭೆಗೂ ಹಲ್ಲೆ ನಡೆದುವ ವಿಷಮ ಸ್ಥಿತಿಗೆ ತಲುಪಬಹುದು ಆತಂಕ ವ್ಯಕ್ತಪಡಿಸಿದರು. 

ಫ್ಯಾಸಿಸಮ್ ಎಲ್ಲಿ ಯಾವಾಗ ಬೇಕಾದರೂ ತಲೆ ಎತ್ತಬಹುದು. ನಿರಂತರವಾಗಿ ಮಾತನಾಡದಿದ್ದರೆ ಈ ಫ್ಯಾಸಿಸಮ್ ನ್ನು ತೊಲಗಿಸಲು ಸಾಧ್ಯವಿಲ್ಲ ಎಂದು ಚಿಲಿ, ವೆನೆಜುಲ್ಲಾ ತೋರಿಸಿಕೊಟ್ಟಿವೆ. ನಾವು ಎಷ್ಟು ಜನ ಇದ್ದೇವೆ ಎಂಬುದು ಮುಖ್ಯವಲ್ಲ, ನಾವು ಮಾತನಾಡಬೇಕು ಮತ್ತು ಇಂತಹ ಕೃತ್ಯಗಳ ಹಿಂದೆ ಆರ್.ಎಸ್.ಎಸ್ ನಂತಹ ಫ್ಯಾಸಿಸ್ಟ್ ಶಕ್ತಿ ಇದೆ ಎಂದು ನಿರಂತರವಾಗಿ ಧೈರ್ಯವಾಗಿ ಹೇಳಬೇಕು ಎಂದು ಹೇಳಿದರು.

ಈ ವೇಳೆ ಸಹಬಾಳ್ವೆ ಅಮೃತ್ ಶೆಣೈ ಅವರು ಮಾತನಾಡಿ ಟಿಕಾಯತ್ ಅವರ ಮೇಲಿನ ಹಲ್ಲೆಯನ್ನು ಯಾವುದೋ ಘನ ಕಾರ್ಯ ಮಾಡಿದಂತೆ ಸಂಭ್ರಮಿಸುತ್ತಿದ್ದಾರೆ. ಇದು ಎಲ್ಲಿ ವರೆಗೆ ಹೋಗುತ್ತದೆ. ನಮಗೆ ಹೊಡೆದವನಿಗೆ ನಾನು ಹೊಡೆಯುವುದು, ನನ್ನನ್ನು ದ್ವೇಷಿಸುವನಿಗೆ ನಾನು ಹಲ್ಲೆ ಮಾಡುವುದು ಮಾಡುತ್ತಾ ಹೋದರೆ ಈ ದೇಶದ ಪರಿಸ್ಥಿತಿ ಎಲ್ಲಿ ಹೋಗಿ ತಲುಪಬಹುದು ಎಂದು ಪ್ರಶ್ನಿಸಿದರು.

ಹಲ್ಲೆಯನ್ನು ಖಂಡಿಸಿದ ಅವರು ಸಮಾಜದಲ್ಲಿ ನಾಗರಿಕತೆ ಎಂಬುದಿಲ್ಲವೇ, ಕೋರ್ಟ್, ನ್ಯಾಯಾಲಯ, ಪೊಲೀಸ್ ಎಂಬುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಇದು ಹೀಗೆ ಆದರೆ ಪೊಲೀಸರಿಗೆ ಯಾಕೆ ಕೋಟಿಗಟ್ಟಲೆ ಸಂಬಳ ನೀಡಬೇಕು ಅದನ್ನು ಇವರಿಗೇ ನೀಡಬಹುದಲ್ಲಾ. ಇವರು ಕಾನೂನು ಕೈಗೆ ತೆಗೆದುಕೊಳ್ಳುತ್ತಾರೆ. ಮತಾಂತರ ಆಗುತ್ತದೆ ಎಂದು ಹಲ್ಲೆ ಮಾಡುತ್ತಾರೆ. ಬೇರೆ ಬೇರೆ ಧರ್ಮದ ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ಒಟ್ಟಿಗೆ ಅಂಗಡಿಗೆ ಹೋಗಿ ಜ್ಯೂಸ್ ಕುಡಿದರೂ ಹಲ್ಲೆ ಮಾಡುತ್ತಾರೆ. ಹಾಗಾದರೆ ಪೊಲೀಸರು ಯಾಕೆ ಇರುವುದು ಇಲ್ಲಿ‌ ಎಂದಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರ ಆಕ್ಷನ್ ಗೆ ರಿಯಾಕ್ಷನ್ ಇದ್ದೆ ಇರುತ್ತದೆ ಎಂಬುದನ್ನು ಉಲ್ಲೇಖಿಸಿದ ಅವರು, ಹೀಗೆ ಕೋಮು ಸಂಘಗಳು ರಿಯಾಕ್ಟ್ ಮಾಡುದಾದರೆ ಪೊಲೀಸರು ಯಾಕೆ ಇರುವುದು ಎಂದು ಪ್ರಶ್ನಿಸಿದ್ದಾರೆ ಹಾಗೂ ಶಾಸಕ ರಘುಪತಿ ಭಟ್, ವೇದವ್ಯಾಸ ಕಾಮತ್ ರವರ ಮಕ್ಕಳು ತ್ರಿಶೂಲ ಹಿಡಿದುಕೊಂಡು ಹಿಂದುತ್ವದ ರಕ್ಷಣೆ ಮಾಡುವುದಿಲ್ಲ. ಹಲ್ಲೆ ಮಾಡುವುದಿಲ್ಲ. ಇದನ್ನು ಬಡ ಹಿಂದುಳಿದ ವರ್ಗದ ಮಾಡುತ್ತಾರೆ. ಮಂತ್ರಿಗಳ ಮಕ್ಕಳು ಶಾಲಾ ಕಾಲೇಜಿಗೆ ಹೋಗಿ ಡಾಕ್ಟರ್, ಇಂಜಿನಿಯರ್ ಗಳು ಆಗುತ್ತಾರೆ.  ಧರ್ಮ ರಕ್ಷಣೆಯ ನೆಪದಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡು ಜೈಲು ಸೇರುವುದು, ತನ್ನ ಜೀವನವನ್ನು ಹಾಳು ಮಾಡಿಕೊಳ್ಳುವುದು ಬಡವರ ಮಕ್ಕಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಎಸ್ ಎಸ್ ಮುಖಂಡ ಸುಂದರ್ ಮಾಸ್ಟರ್, ರಮೇಶ್ ಕಾಂಚನ್, ಹುಸೆನ್ ಕೊಡಿ ಬೆಂಗ್ರೆ ಇದ್ದರು.

Leave a Reply

Your email address will not be published. Required fields are marked *

error: Content is protected !!