ಉಡುಪಿ: ಜೂ.6-ಮೀನುಗಾರ ಸಮುದಾಯದವರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ

ಉಡುಪಿ ಮೇ 28 (ಉಡುಪಿ ಟೈಮ್ಸ್ ವರದಿ) : ಕರ್ನಾಟಕದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕರಾವಳಿ ಭಾಗದ ಮೀನುಗಾರ ಸಮುದಾಯದವರು ಪರಿಶಿಷ್ಟ ಜಾತಿಯ ಮೊಗೇರ ಜನಾಂಗದ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸುತ್ತಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಅವರು, ಮೀನುಗಾರ ಸಮುದಾಯದವರಿಗೆ ಪರಿಶಿಷ್ಟ ಜಾತಿಯ ಮೊಗೇರ ಜನಾಂಗದ ಜಾತಿ ಪ್ರಮಾಣ ಪತ್ರ ನೀಡುವುದನ್ನು ಖಂಡಿಸಿ ಜೂನ್ 6 ರಂದು ಉಡುಪಿಯಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ಮುಗೇರ ಸಂಘದ ಜಂಟಿ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಬಹಿರಂಗ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಹಾಗೂ ಪರಿಶಿಷ್ಟ ಜಾತಿಯ 101 ಜಾತಿ ಪಟ್ಟಿಯಲ್ಲಿ ಮೊಗೇರ ಎಂಬ ಹೆಸರೇ ಇಲ್ಲ. ಹಾಗಿದ್ದರೂ ಅಧಿಕಾರಿಗಳು ಸುಳ್ಳು ಜಾತಿ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಅದೇ ರೀತಿ, ಅಸ್ಪೃಶ್ಯ ಜಾತಿಯಲ್ಲದ ಮೀನುಗಾರರು ಹಾಗೂ ಭೋವಿ ಜನಾಂಗದವರೂ ಈಗಾಗಲೇ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಸೌಲಭ್ಯಗಳನ್ನು ಪಡೆದಿರುವ ಬಗ್ಗೆ ಈಗಾಗಲೇ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಿದ್ದರೂ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿರುವುದು ಖಂಡನೀಯ ಎಂದಿದ್ದಾರೆ.

ಈ ಮೂರು ಜಿಲ್ಲೆಯಲ್ಲಿರುವ ಕರಾವಳಿ ಭಾಗದ ಮೀನುಗಾರರು ಈಗಾಗಲೇ ಪ್ರವರ್ಗ-1ರಲ್ಲಿ ಅತಿ ಹೆಚ್ಚಿನ ಸರಕಾರಿ ಸೌಲಭ್ಯ ಪಡೆದು ಉದ್ಯಮ, ಶೈಕ್ಷಣಿಕ, ಬ್ಯಾಂಕ್, ಸಹಕಾರಿ ಸಂಘಗಳನ್ನು ಸ್ಥಾಪಿಸಿ ಭಲಾಡ್ಯ ಸಮುದಾಯದವರಾಗಿದ್ದಾರೆ. ಸಂವಿಧಾನದಲ್ಲಿರುವಂತೆ ಮೀಸಲಾತಿ ಅಸ್ಪೃಶ್ಯ ಜನಾಂಗಕ್ಕೆ ಪ್ರಾತಿನಿಧ್ಯ ಒದಗಿಸಲು ನೀಡಿರುವ ಸೌಲಭ್ಯವಾಗಿದೆ. ಅಸ್ಪಶ್ಯರಲ್ಲದ ಜನಾಂಗಕ್ಕೆ ಪ. ಜಾತಿಯ ಮೀಸಲಾತಿ ನೀಡಿದಲ್ಲಿ ಈ ವರ್ಗಕ್ಕೆ ತೀವ್ರ ಅನ್ಯಾಯವಾಗುತ್ತದೆ. ಆದ್ದರಿಂದ ಈಗಾಗಲೇ ನಕಲು ಜಾತಿ ಪ್ರಮಾಣ ಪತ್ರ ಪಡೆದು, ಮೀನುಗಾರ ಮತ್ತು ಬೋವಿ ಜನಾಂಗದವರಿಗೆ ನೀಡಿರುವ ಸರ್ಕಾರಿ ಸೌಲಭ್ಯಗಳನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಮತ್ತು ಅಸ್ಪಶ್ಯರಲ್ಲದ ಮೀನುಗಾರ ಸಮುದಾಯಕ್ಕೆ ನೀಡಿರುವ ಪರಿಶಿಷ್ಟ ಜಾತಿಯ ಮೊಗೇರ ಪ್ರಮಾಣಪತ್ರಗಳನ್ನು ಕೂಡಲೇ ತಡೆಹಿಡಿಯಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ  ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮ್ ರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಅಣ್ಣಪ್ಪ ನಕ್ರೆ, ಅಪ್ಪು ಮರ್ಣೆ, ಮೊಗೇರ ಸಂಘಟನೆ ಕಾಪು ಇದರ  ಚರಣ್ ರಾಜ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!