ಆರ್ಥಿಕ ಹಿಂದುಳಿದ ಮೇಲ್ವರ್ಗದ ಪಟ್ಟಿ: ಜಿಎಸ್‌ಬಿ ಸೇರ್ಪಡೆಗೆ ಮನವಿ
ಕಾರ್ಕಳ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜಾತಿ ಪಟ್ಟಿಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜವನ್ನು ಸೇರಿಸಲು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಶಾಸಕ ವಿ.ಸುನಿಲ್ ಕುಮಾರ್ ಮೂಲಕ ಮನವಿ ನೀಡಲಾಯಿತು. ಮನವಿ ಸಲ್ಲಿಸಿದ ಉಡುಪಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ‘ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಕುಟುಂಬಗಳಿಗೆ ದೇಶದ ಎಲ್ಲಾ ಭಾಗಗಳಲ್ಲಿ ಸರ್ಕಾರಿ ನೌಕರಿ ಮತ್ತು ಶೈಕ್ಷಣಿಕ ಸೌಲಭ್ಯಗಳಿಗೆ ಮೀಸಲಾತಿಯನ್ನು ಕಲ್ಪಿಸುವ ಕಾಯ್ದೆ ರೂಪುಗೊಂಡಿದ್ದು, ಗೌಡಸಾರಸ್ವತ ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೂ ಈ ಸೌಲಭ್ಯ ಸಿಗಬೇಕಾಗಿದೆ. ರಾಜ್ಯ ಸರ್ಕಾರದ ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ಸುತ್ತೋಲೆಯಲ್ಲಿ ಈ ಜಾತಿಯ ಹೆಸರು ಸೇರ್ಪಡೆಯಾಗಿಲ್ಲ ಎಂಬ ಹಿಂಬರಹ ನೀಡಿ ಜಾತಿ ಪ್ರಮಾಣ ಪತ್ರ ಅರ್ಜಿಯನ್ನು ನಿರಾಕರಿಸಲಾಗುತ್ತಿದೆ. ಇದರಿಂದಾಗಿ ಜಿ.ಎಸ್ ಬಿ ಸಮುದಾಯದ ಪ್ರತಿಭಾನ್ವಿತ ಆರ್ಥಿಕವಾಗಿ ಹಿಂದುಳಿದ ಕುಟುಂಬದವರು ಕೇಂದ್ರ ಸರ್ಕಾರ ರೂಪಿಸಿರುವ ಮೀಸಲಾತಿ ಸೌಲಭ್ಯ ಸಿಗದೇ ತೊಂದರೆಯನ್ನು ಅನುಭಸುತ್ತಿದ್ದಾರೆ’ ಎಂದರು. ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈ, ಜಿ.ಎಸ್.ಬಿ ಸಮಾಜ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ಕಾರ್ಕಳ ಪಿಕಾರ್ಡ್ ಬ್ಯಾಂಕಿನ ನಿರ್ದೇಶಕ ಮುಂಡ್ಕೂರು ರಘವೀರ್ ಶೆಣೈ ಇದ್ದರು. |