ತೀವ್ರ ಗಾಳಿಯಿಂದಾಗಿ ಎರಡು ಬಾರಿ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ, ಬೆಂಕಿ ಕಾಣಿಸಿಕೊಂಡಿಲ್ಲ: ಏರ್ ಇಂಡಿಯಾ ಸ್ಪಷ್ಟನೆ
ಕೋಝಿಕ್ಕೋಡ್: ಭಾರೀ ಮಳೆಯ ಮಧ್ಯೆ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ರನ್ ವೇಯಿಂದ ಜಾರಿ 50 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಇದರಿಂದ ವಿಮಾನ ಎರಡು ತುಂಡಾಗಿ, ಪ್ರಯಾಣಿಕರ ಸಾವು ನೋವಿನ ಪ್ರಮಾಣ ತೀವ್ರವಾಗಿದೆ.
ಅಪಘಾತವಾದ ತಕ್ಷಣವೇ ಹೇಳಿಕೆ ಹೊರಡಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್, ಐಎಕ್ಸ್ 134 ಕಾರ್ಯನಿರ್ವಹಣೆಯ ಬಿ737 ವಿಮಾನ ದುಬೈಯಿಂದ ಕೋಝಿಕ್ಕೋಡ್ ಗೆ ಆಗಮಿಸಿತ್ತು. ಲ್ಯಾಂಡಿಂಗ್ ವೇಳೆ ಬೆಂಕಿ ಕಾಣಿಸಿಕೊಂಡಿಲ್ಲ ಎಂದು ತಿಳಿಸಿದೆ.
ನಿನ್ನೆ ಅಪಘಾತದಲ್ಲಿ ಮೃತಪಟ್ಟ ಇಬ್ಬರು ಪೈಲಟ್ ಗಳು ಕೋಝಿಕ್ಕೋಡ್ ನ ರನ್ ವೇಯಲ್ಲಿ ಲ್ಯಾಂಡಿಂಗ್ ಮಾಡುವ ಮೊದಲು ಎರಡು ಸಲ ಲ್ಯಾಂಡಿಂಗ್ ಮಾಡಲು ಯತ್ನಿಸಿದ್ದರು. ಆದರೆ ತೀವ್ರ ಗಾಳಿಯಿಂದಾಗಿ ಸಾಧ್ಯವಾಗಿರಲಿಲ್ಲ, ಮೂರನೇ ಬಾರಿ ಲ್ಯಾಂಡಿಂಗ್ ಮಾಡುವಾಗ ದುರಂತ ಸಂಭವಿಸಿದೆ.
ಹವಾಮಾನ ರಾಡಾರ್ ನಲ್ಲಿ ದಾಖಲಾದ ಪ್ರಕಾರ ಪೈಲಟ್ ರನ್ ವೇ 28ರಲ್ಲಿ ಇಳಿಸಲು ನೋಡಿದ್ದರು, ಆದರ ಪ್ರತಿಕೂಲ ಹವಾಮಾನ ಇದ್ದುದರಿಂದ ಎರಡು ಬಾರಿ ಸುತ್ತಾಟ ನಡೆಸಿ ರನ್ ವೇ 10ರಲ್ಲಿ ವಿರುದ್ಧ ದಿಕ್ಕಿನಿಂದ ಬಂದು ಇಳಿಸಿದರು, ಈ ವೇಳೆ ಅಪಘಾತಕ್ಕೀಡಾಯಿತು ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಹಿರಿಯ ಅಧಿಕಾರಿ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಮಧ್ಯದಲ್ಲಿ ಕೇಂದ್ರ ಸರ್ಕಾರದ ವಂದೇ ಭಾರತ್ ಕಾರ್ಯಕ್ರಮದಡಿಯಲ್ಲಿ ವಿದೇಶದಲ್ಲಿರುವ ಭಾರತೀಯರನ್ನು ಕರೆತರುವ ಭಾಗವಾಗಿ ಐಎಕ್ಸ್-1344, ಬಿ 737 ದುಬೈಯಿಂದ ಕಲ್ಲಿಕೋಟೆಗೆ ವಿಮಾನ ಆಗಮಿಸಿತ್ತು. ಒಟ್ಟು 190 ಪ್ರಯಾಣಿಕರಿದ್ದರು. 2 ಸಾವಿರ ಮೀಟರ್ ವರೆಗೆ ವಿಮಾನ ಕಾಣಿಸುತ್ತಿತ್ತು, ಈ ಸಮಯದಲ್ಲಿ ಮಳೆ ಜೋರಾಗಿ ಬರುತ್ತಿತ್ತು. ಲ್ಯಾಂಡಿಂಗ್ ವೇಳೆ ವೇಗದಲ್ಲಿದ್ದ ವಿಮಾನ ಜಾರಿ ಕಂದಕಕ್ಕೆ ಬಿದ್ದು ಎರಡು ಹೋಳಾಯಿತು.
ವಿಮಾನದಲ್ಲಿ 184 ಮಂದಿ ಪ್ರಯಾಣಿಕರು, 6 ಸಿಬ್ಬಂದಿಗಳಿದ್ದರು. ಅಪಘಾತದಲ್ಲಿ ಮೃತಪಟ್ಟ ಪೈಲಟ್ ಗಳು ಮತ್ತು ಪ್ರಯಾಣಿಕರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಏರ್ ಇಂಡಿಯಾ ತಿಳಿಸಿದೆ.