ವಿಮಾನ ಲ್ಯಾಂಡಿಂಗ್‌ ವೇಳೆ ದುರಂತ: 16 ಸಾವು, 123 ಮಂದಿಗೆ ಗಾಯ

ಕೋಯಿಕ್ಕೋಡ್‌: ದುಬೈ–ಕೋಯಿಕ್ಕೋಡ್‌ ನಡುವಿನ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ (ಐಎಕ್ಸ್‌–1344 B737)  ಕೇರಳದ ಕೋಯಿಕ್ಕೋಡ್‌ನ  ಕರಿಪುರ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡುವ ವೇಳೆ ಅವಘಡಕ್ಕೀಡಾಗಿದೆ. ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದು, 123 ಮಂದಿಗೆ ಗಾಯಗಳಾಗಿವೆ. 15 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ತಲುಪಿದ್ದು ರಕ್ಷಣಾ ಕಾರ್ಯಗಳು ನಡೆಯುತ್ತಿವೆ. 123ಕ್ಕಿಂತಲೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ 7.45ರಲ್ಲಿ ಅಪಘಾತ ಸಂಭವಿಸಿದೆ ಎಂದು ಕೊಂಡೋಟ್ಟಿ ಪೊಲೀಸರು ತಿಳಿಸಿದ್ದಾರೆ.

ವಿಮಾನದಲ್ಲಿ ಒಟ್ಟು 190 ಇದ್ದರು. ಇಬ್ಬರು ಪೈಲಟ್‌ಗಳು, ನಾಲ್ವರು  ಸಿಬ್ಬಂದಿ, 174 ಪ್ರಯಾಣಿಕರ ಜತೆ 10 ಮಕ್ಕಳು ಇದ್ದರು  ಎಂದು ಡಿಜಿಸಿಎ ಮಾಹಿತಿ ನೀಡಿದೆ   

ಮೃತ ಪೈಕಿ ಪೈಲಟ್ ಕೂಡ ಒಬ್ಬರಾಗಿದ್ದು, ಅವರನ್ನು ದೀಪಕ್ ವಿ ಸಾಠೆ ಎಂದು ಗುರುತಿಸಲಾಗಿದೆ. ಅವರು ವಿಮಾನ ಹಾರಾಟದಲ್ಲಿ ಅನುಭವಿಯಾಗಿದ್ದರು. ಅಲ್ಲದೇ, ಭಾರತೀಯ ವಾಯುಪಡೆಯಲ್ಲೂ ಅವರು ಕಾರ್ಯನಿರ್ವಹಿಸಿದ್ದರು. 

ಸದ್ಯ ದುರಂತಕ್ಕೀಡಾಗಿರುವ ವಿಮಾನವು ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ದುಬೈನಿಂದ ಭಾರತಕ್ಕೆ ಪ್ರಯಾಣಿಕರನ್ನು ಕರೆತರುತ್ತಿತ್ತು. 

ವಿಮಾನ ಎರಡು ತುಂಡಾಗಿದೆ: ಡಿಜಿಸಿಎ ಹೇಳಿಕೆ

ದುಬೈನಿಂದ ಕೋಯಿಕ್ಕೋಡ್‌ಗೆ ಮರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ(ಎಎಕ್ಸ್‌ಬಿ 1344, ಬಿ 737) 10ನೇ ರನ್‌ವೇಗೆ ಇಳಿದ ನಂತರ ಚಲಿಸುವುದನ್ನು ಮುಂದುವರೆಸಿದೆ. ರೇನ್‌ವೇ ಅಂತ್ಯಕ್ಕೆ ಬಂದಾಗ ಭಾರಿ ಮಳೆಯ ಕಾರಣ ಕಣಿವೆಯಲ್ಲಿ ಕೆಳಗೆ ಬಿದ್ದು ಎರಡು ತುಂಡುಗಳಾಗಿ ಒಡೆದಿದೆ ಎಂದು ಡಿಜಿಸಿಎ ತಿಳಿಸಿದೆ. 

ಮಾಹಿತಿ ಪಡೆದ ಪ್ರಧಾನಿ

ದುರ್ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರಿಂದ ಮಾಹಿತಿ ಪಡೆದಿದ್ದಾರೆ. ಕೋಯಿಕ್ಕೋಡ್‌ ಮತ್ತು ಮಲಪ್ಪುರಂನ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ ಎಂದು ಪಿಣರಾಯಿ ವಿಜಯನ್‌ ಅವರು ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ. ಅಲ್ಲದೆ, ರಕ್ಷಣಾ ಕಾರ್ಯಚರಣೆಗೆ ಅಗತ್ಯವಿರುವ ಎಲ್ಲ ಸೇವೆಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಸಚಿವ ಎ.ಸಿ ಮೊಯಿದ್ದೀನ್‌ ಅವರು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ. 

ಲ್ಯಾಂಡಿಗ್‌ ಬೆಂಕಿ ಹೊತ್ತಿಕೊಂಡಿಲ್ಲ; ವಿಮಾನದಲ್ಲಿ 174 ಪ್ರಯಾಣಿಕರು, 10 ಮಕ್ಕಳು, ಇಬ್ಬರು ಪೈಲಟ್‌ಗಳು ಮತ್ತು 5 ಕ್ಯಾಬಿನ್ ಸಿಬ್ಬಂದಿ ಇದ್ದಾರು. ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಮಾಧ್ಯಮ ಡಿಜಿ ರಾಜೀವ್ ಜೈನ್ ತಿಳಿಸಿದ್ದಾರೆ.

ವಿಮಾನ ದುರಂತಕ್ಕೆ ಸಂಬಂಧಿಸಿದ್ದಂತೆ ದುಬೈನಲ್ಲಿರುವ ಭಾರತೀಯ ಕನ್ಸುಲೇಟ್‌ ಜನರಲ್‌ ಟ್ವೀಟ್‌ ಮಾಡಿದ್ದು, ಹೆಲ್ಪ್‌ ಲೈನ್‌ ನಂಬರ್‌ಗಳನ್ನು ಬಿಡುಗಡೆ ಮಾಡಿದ್ದಾರೆ.  056 546 3903, 0543090572, 0543090572, 0543090575 ಸಂಖ್ಯೆಯಲ್ಲಿ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಕನ್ಸುಲೇಟ್‌ ಕಚೇರಿ ತಿಳಿಸಿದೆ

ಕೋಯಿಕ್ಕೋಡ್‌ನಲ್ಲಿ ಸಂಭವಿಸಿದ ವಿಮಾನ ದುರಂತದ  ಬಗ್ಗೆ ದುಃಖ ವ್ಯಕ್ತ ಪಡಿಸಿದ ಮೋದಿ ಗಾಯಗೊಂಡವರು ಶೀಘ್ರವೇ ಗುಣವಾಗಲಿ ಎಂದು ಆಶಿಸಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ಪ್ರಸ್ತುತ ಪರಿಸ್ಥಿತಿ ಬಗ್ಗೆ  ಮಾತನಾಡಿದ್ದು, ಸಂಬಂಧಪಟ್ಟ ಇಲಾಖೆಯವರು ಎಲ್ಲ ರೀತಿಯ ನೆರವುಗಳನ್ನು ಒದಗಿಸುತ್ತಿದ್ದಾರೆ ಎಂದು ನರೇಂದ್ರ ಮೋದಿ ಟ್ವೀಟಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!