ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿ, ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದ್ದಾರೆ. ಇಂದು ಗುರುವಾರ ವಿಧಾನಸೌಧದಲ್ಲಿ ಮಧ್ಯಾಹ್ನ ಸಚಿವ ಸಂಪುಟ ಸಭೆ ನಡೆಯಲಿದೆ.
ಈ ಸಂದರ್ಭದಲ್ಲಿ ಸಹಜವಾಗಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆಯ ಬಗ್ಗೆ ಕುತೂಹಲ ಮೂಡಿಸಿದೆ. ಇಂದು ಸಚಿವ ಸಂಪುಟ ಸಭೆಯ ನಂತರ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಘೋಷಣೆ ಮಾಡುತ್ತಾರೆಯೇ, ಎಷ್ಟು ದಿನದಲ್ಲಿ ಸಂಪುಟ ವಿಸ್ತರಣೆಯಾಗಲಿದೆ. ಯಾರ್ಯಾರಿಗೆ ಸಚಿವ ಪಟ್ಟ ಸಿಗಲಿದೆ, ಯಾರ ಖಾತೆ ಬದಲಾಗಿದೆ ಎಂಬ ಕುತೂಹಲ ಮನೆಮಾಡಿದೆ.
ಈ ಕುರಿತು ಈಗಾಗಲೇ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಇಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಕೂಡ ಹೇಳಿದರು. ಇಂದು ಬೆಳಗ್ಗೆ ಸಭೆಯನ್ನು ನಡೆಸಲಾಗುತ್ತಿದ್ದು, ಅದರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಪಟ್ಟಂತೆ ಕಾನೂನು ಸಚಿವರು, ಅಡ್ವೊಕೇಟ್ ಜನರಲ್ ಸಂಬಂಧ ಪಟ್ಟವರ ಜೊತೆ ಚರ್ಚಿಸಿ ಸುಪ್ರೀಂ ಕೋರ್ಟ್ ನ ಎರಡು ತೀರ್ಪುಗಳ ಬಗ್ಗೆ ಸಂಪೂರ್ಣ ವಿಶ್ಲೇಷಣೆ ಮಾಡಿ, ರಾಜಕೀಯ ಪ್ರಾತಿನಿಧ್ಯ ನೀಡಲು ಈಗಾಗಲೇ ಕಮಿಷನ್ ನೇಮಿಸಿದ್ದು ಅದರ ಬಗ್ಗೆ ಹಾಗೂ ವಿರೋಧ ಪಕ್ಷದ ನಾಯಕರು ಬರೆದಿರುವ ಪತ್ರ ಕುರಿತು ಕೂಡ ಚರ್ಚೆ ಮಾಡಲಾಗುವುದು ಎಂದರು.
ಇದುವರೆಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಂವಿಧಾನ ಪ್ರಕಾರ ಇದುವರೆಗೆ ಒಬಿಸಿಯವರಿಗೆ ಪ್ರಾತಿನಿಧ್ಯ ನೀಡುತ್ತಾ ಬಂದಿದ್ದೆವು. ಈಗ ಒಬಿಸಿ ಇಟ್ಟುಕೊಂಡೇ ಚುನಾವಣೆ ಮಾಡಬೇಕೆಂದು ಎಲ್ಲಾ ರಾಜಕೀಯ ಪಕ್ಷಗಳ ಮತ್ತು ಎಲ್ಲಾ ರಾಜ್ಯಗಳ ವಿಚಾರವೂ ಕೂಡ ಆಗಿದೆ. ಹೀಗಾಗಿ ಒಬಿಸಿ ಇಟ್ಟುಕೊಂಡು ಚುನಾವಣಾ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆದಿದೆ ಎಂದರು.