ಭ್ರಷ್ಟಾಚಾರದ ಮಸಿ ಬಳಿದುಕೊಂಡ ಬಿಜೆಪಿಗೆ ಜನ ಹಾದಿ ಬೀದಿಯಲ್ಲಿ ಉಗಿಯುತ್ತಿದ್ದಾರೆ- ಡಿಕೆಶಿ
ಬೆಂಗಳೂರು ಮೇ.9: ಉದ್ದೇಶ ಪೂರ್ವಕವಾಗಿ ಆಜಾನ್ ವಿಚಾರ ಕೆದಕಿ, ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಸರ್ಕಾರದ ವೈಫಲ್ಯ, ಇದನ್ನು ನಿಯಂತ್ರಿಸದಿದ್ದರೆ ರಾಜ್ಯದಲ್ಲಿ ಅಶಾಂತಿ, ಕೋಮು ಸಂಘರ್ಷ ಹೆಚ್ಚುತ್ತದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕು ಎಂದರು. ಹಾಗೂ ಆಜಾನ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಮಾನ ಮಾಡಿದೆ. ಈಗಾಗಲೇ ಪೊಲೀಸ್ ನವರು ಕೂಡ ನೊಟೀಸ್ ಜಾರಿ ಮಾಡಿದ್ದಾರೆ. ನಮ್ಮ ಪಕ್ಷದ ನಾಯಕರ ತಂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದು ಮುಖ್ಯಮಂತ್ರಿಗಳ ಜವಾಬ್ದಾರಿ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮತ್ತೊಂದು ಕೋಮುಗಲಭೆಗೆ ಸಿದ್ಧತೆ ನಡೆದಿತ್ತು ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಚಾರದಲ್ಲಿ ಕ್ರಮ ಕೈಗೊಳ್ಳುವುದು ಪೊಲೀಸರ ಕರ್ತವ್ಯ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಹಿತಿ ಪಡೆದ ನಂತರ ಮಾತನಾಡುತ್ತೇನೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ, ‘ಕಾಂಗ್ರೆಸ್ ಅಜೆಂಡಾ ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ’ ಎಂಬ ಹೇಳಿಕೆ ಬಗ್ಗೆ ಉತ್ತರಿಸಿದ ಅವರು, ‘ದಿನ ಬೆಳಗಾದರೆ ಸರ್ಕಾರದ ಅಕ್ರಮ, ಭ್ರಷ್ಟಾಚಾರಗಳು ಬೆಳಕಿಗೆ ಬರುತ್ತಿವೆ. ನಿನ್ನೆ ಪತ್ರಿಕೆಯಲ್ಲಿ ಯಾವ ಸರ್ಕಾರಿ ಹುದ್ದೆಗೆ ಎಷ್ಟೆಷ್ಟು ದರ ನಿಗದಿಯಾಗಿದೆ ಎಂದು ವರದಿಯಾಗಿದೆ. ಇಷ್ಟೋಂದು ಭ್ರಷ್ಟಾಚಾರದ ಮಸಿ ಬಳಿದುಕೊಂಡಿರುವ ಬಿಜೆಪಿಯವರಿಗೆ ಮುಖ ತೋರಲು ಆಗುತ್ತಿಲ್ಲ. ಜನ ಹಾದಿ-ಬೀದಿಯಲ್ಲಿ ಉಗಿಯುತ್ತಿದ್ದು, ಮೊದಲು ಅವರು ತಮ್ಮ ಮುಖವನ್ನು ತೊಳೆದುಕೊಳ್ಳಲಿ. ನಂತರ ನಮ್ಮ ಬಗ್ಗೆ ಮಾತನಾಡಲಿ’ ಎಂದು ಟೀಕಿಸಿದರು.