ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿಯಿಂದ ನಾಳೆ ಚಾಲನೆ
ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆ ಕಾರ್ಯಕ್ರಮ ಇದೇ ಐದರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೋವಿಡ್ ಕಾರಣದಿಂದಾಗಿ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಸೇರದಂತೆ ಎಚ್ಚರ ವಹಿಸಲಾಗಿದೆ. ಭೂಮಿ ಪೂಜೆಗೆ ಸಂಬಂಧಿಸಿದ ಮೂರು ದಿನಗಳ ವಿಧಿ ವಿಧಾನಗಳು ಸೋಮವಾರ ಆರಂಭವಾಗಿವೆ. ಗೌರಿ ಗಣೇಶ ಮತ್ತು ಕುಲದೇವಿಯರ ಪೂಜೆಯೊಂದಿಗೆ ಪ್ರಕ್ರಿಯೆ ಶುರುವಾಗಿದೆ. ವೇದ ಮಂತ್ರ ಮತ್ತು ‘ಜೈ ಶ್ರೀರಾಂ’ ಘೋಷವು ಅಯೋಧ್ಯೆಯಲ್ಲಿ ಮೊಳಗಿದೆ. ಬುಧವಾರ ಈ ಪೂಜೆ ಪೂರ್ಣಗೊಳ್ಳಲಿದೆ. ವಾರಾಣಸಿಯಿಂದ ಕರೆಸಿಕೊಳ್ಳಲಾಗಿರುವ 21 ಪುರೋಹಿತರು ಪೂಜೆ ನಡೆಸುತ್ತಿದ್ದಾರೆ. ಆಹ್ವಾನಿತರು ಮಾತ್ರ ಕಾರ್ಯಕ್ರಮಕ್ಕೆ ಬರಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಅವರು ಅಯೋಧ್ಯೆಗೆ ಸೋಮವಾರ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಸುಮಾರು 200 ಗಣ್ಯ ರಿಗೆ ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಅಯೋಧ್ಯೆಗೆ ಬರಲು ಬಯಸುವವರಿಗೆ ಕೋವಿಡ್ ಪಿಡುಗು ನಿವಾರಣೆ ಬಳಿಕ ವ್ಯವಸ್ಥೆ ಮಾಡಲಾ ಗುವುದು ಎಂದು ಯೋಗಿ ಹೇಳಿದ್ದಾರೆ. ಸೇನಾದಿಂದ ₹1 ಕೋಟಿ ದೇಣಿಗೆ: ಅಯೋಧ್ಯೆಯ ಮಂದಿರ ನಿರ್ಮಾಣಕ್ಕಾಗಿ ಶಿವಸೇನಾ ₹1 ಕೋಟಿ ದೇಣಿಗೆ ನೀಡಿದೆ. ಒಂದು ಕೋಟಿ ರೂಪಾಯಿ ನೀಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಈ ಹಿಂದೆಯೇ ಘೋಷಿಸಿದ್ದರು. ಈ ಮೊತ್ತವನ್ನು ಜುಲೈ 27ರಂದು ಆರ್‌ಟಿಜಿಎಸ್ ಮೂಲಕ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ವರ್ಗಾಯಿಸಲಾಗಿದೆ ಎಂದು ಸೇನಾ ಹೇಳಿದೆ. ಮುಂದೂಡಿ: ದಿಗ್ವಿಜಯ್ ಮನವಿ ಭೂಮಿ ಪೂಜೆ ಕಾರ್ಯಕ್ರಮವನ್ನು ಮುಂದೂಡಬೇಕು. ಈಗ ನಿಗದಿ ಮಾಡಿದ ಸಮಯವು ಶುಭಕರವಲ್ಲ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ. ‘ಮೋದಿ ಅವರೇ, ಮತ್ತೆ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಕಾರ್ಯಕ್ರಮವನ್ನು ಮುಂದೂಡಿ. ನೂರಾರು ವರ್ಷಗಳ ಹೋರಾಟದ ಬಳಿಕ ಮಂದಿರ ನಿರ್ಮಾಣದ ಅವಕಾಶ ಒದಗಿಬಂದಿದೆ. ನಿಮ್ಮ ದುರಹಂಕಾರದ ಮೂಲಕ ಈ ಹಾದಿಯಲ್ಲಿ ತೊಡಕು ಉಂಟಾಗಲು ಅವಕಾಶ ಕೊಡಬೇಡಿ’ ಎಂದು ಸರಣಿ ಟ್ವೀಟ್‌ನಲ್ಲಿ ದಿಗ್ವಿಜಯ್ ಹೇಳಿದ್ದಾರೆ. ‘ಆಗಸ್ಟ್ 5 ಭೂಮಿಪೂಜೆಗೆ ಸೂಕ್ತವಾದ ಸಮಯವಲ್ಲ ಎಂದು ಜಗದ್ಗುರು ಸ್ವರೂಪಾನಂದಜಿ ಮಹಾರಾಜ್ ಹೇಳಿದ್ದಾರೆ. ಈಗ, ಮೋದಿ ಅವರ ಅನುಕೂಲಕ್ಕಾಗಿ ಈ ದಿನಾಂಕವನ್ನು ನಿಗದಿ ಮಾಡಲಾಗಿದೆ. ಸಾವಿರಾರು ವರ್ಷಗಳ ಹಿಂದೂ ನಂಬಿಕೆಗಿಂತ ಮೋದಿ ಅವರು ಮೇಲೆ ಇದ್ದಾರೆ ಎಂಬುದು ಇದರ ಅರ್ಥ. ಇದೆಂಥ ಹಿಂದುತ್ವ’ ಎಂದು ದಿಗ್ವಿಜಯ್ ಪ್ರಶ್ನಿಸಿದ್ದಾರೆ. ಸನಾತನ ಧರ್ಮದ ಕೆಲವು ತತ್ವಗಳನನ್ನು ನಿರ್ಲಕ್ಷಿಸಿದ ಕಾರಣಕ್ಕಾಗಿಯೇ ಕೆಲವು ನಾಯಕರಿಗೆ ಕೋವಿಡ್ ಬಂದಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ‘ರಾಮಲಲ್ಲಾ’ಗೆ ಭವ್ಯ ದಿರಿಸು ರಾಮಲಲ್ಲಾನಿಗೆ ವಿಶೇಷವಾಗಿ ತಯಾರಿಸಲಾದ, ನವರತ್ನಗಳಿರುವ ನಾಲ್ಕು ದಿರಿಸುಗಳನ್ನು ತಾತ್ಕಾಲಿಕ ರಾಮಮಂದಿರದ ಅರ್ಚಕರಿಗೆ ಹಸ್ತಾಂತರಿಸಲಾಗಿದೆ. ಸೋಮವಾರ ಬಿಳಿ, ಮಂಗಳವಾರ ಕೆಂಪು, ಬುಧವಾರ ಹಸಿರು ಮತ್ತು ಗುರುವಾರ ಹಳದಿ ದಿರಿಸನ್ನು ರಾಮಲಲ್ಲಾ ವಿಗ್ರಹಕ್ಕೆ ತೊಡಿಸಲಾಗುವುದು. ಅಯೋಧ್ಯೆಯ ಎಲ್ಲ ಪ್ರಮುಖ ದೇವಾಲಯಗಳಿಗೆ ದೀಪಾಲಂಕಾರ ಮಾಡಲಾಗಿದೆ. ರಾಮಜನ್ಮಭೂಮಿ ಬಾಬರಿ ಮಸೀದಿ ನಿವೇಶನ ವಿವಾದದ ಅರ್ಜಿದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಅವರು ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ‘ಹೌದು, ನನಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಆಹ್ವಾನ ಬಂದಿದೆ. ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ವಿವಾದವು ಕೊನೆಯಾಗಿದೆ’ ಎಂದು ಅನ್ಸಾರಿ ಹೇಳಿದ್ದಾರೆ. |