ರಾಮಮಂದಿರ ಭೂಮಿ ಪೂಜೆಗೆ ಪೇಜಾವರ ಶ್ರೀ, ವಿರೇಂದ್ರ ಹೆಗ್ಗಡೆ ಸೇರಿ ರಾಜ್ಯದ ಐವರಿಗೆ ಆಹ್ವಾನ
ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಗಸ್ಟ್ 5 ರಂದು ನಡೆಯುವ ಭೂಮಿ ಪೂಜೆ ಸಮಾರಂಭಕ್ಕೆ ರಾಜ್ಯದ ಐವರು ಆಹ್ವಾನಿತರಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಸೇರಿದ್ದಾರೆ.
ಪೇಜಾವರ ಶ್ರೀಗಳು ಮತ್ತು ಡಾ ವೀರೇಂದ್ರ ಹೆಗ್ಗಡೆ ಅವರಲ್ಲದೆ, ಶೃಂಗೇರಿ ಮಠ, ಆದಿಚುಂಚನಗಿರಿ ಮಠ ಮತ್ತು ಸುತ್ತೂರು ಮಠದ ಮಠಾಧೀಶರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ಈಗಾಗಲೇ ರಾಜ್ಯದ ಎಲ್ಲಾ ನದಿಗಳು ಮತ್ತು ಧಾರ್ಮಿಕ ಸ್ಥಳಗಳಿಂದ ಅಯೋಧ್ಯೆಗೆ ಜಲ ಮತ್ತು ಮಣ್ಣು ಕಳುಹಿಸಲಾಗಿದೆ. ದೇವಾಲಯದ ಸ್ಥಳವನ್ನು ಪವಿತ್ರಗೊಳಿಸಲು ಜಲವನ್ನು ಬಳಸಲಾಗುತ್ತದೆ ಎಂದು ವಿಶ್ವಹಿಂದೂ ಪರಿಷತ್ ಪ್ರಚಾರ ಪ್ರಮುಖ್ ಬಸವರಾಜ್ ಹೇಳಿದ್ದಾರೆ.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾವೇರಿ ಮತ್ತು ಕಪಿಲಾ ನದಿಗಳ ಜಲ ಕಳುಹಿಸಿದ್ದಾರೆ. ಧರ್ಮಸ್ಥಳ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ನೇತ್ರಾವತಿ ನದಿಯಿಂದ ನೀರನ್ನು ಕಳುಹಿಸಿದರೆ, ಶೃಂಗೇರಿ ಮಠದ ಶಂಕರಾಚಾರ್ಯ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಅವರು ತುಂಗಾ, ಭದ್ರಾವತಿ ಮತ್ತು ಶರಾವತಿ ಜಲವನ್ನು ಕಳುಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ಕೃಷ್ಣಾ, ಭೀಮ, ಮಲಪ್ರಭ ಮತ್ತು ಘಟಪ್ರಭದಂತಹ ಎಲ್ಲಾ ಪ್ರಮುಖ ನದಿಗಳಿಂದ ವಿವಿಧ ಮಠಾಧೀಶರು ಜಲವನ್ನು ಸಂಗ್ರಹಿಸಿ ಕಳುಹಿಸಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ, ಉಡುಪಿಯಲ್ಲಿನ ಶ್ರೀ ಕೃಷ್ಣ ದೇವಸ್ಥಾನ, ಚಿಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರಂಭಾಪುರಿ ದೇವಸ್ಥಾನ, ತುಮಕೂರಿನ ಸಿದ್ದಗಂಗ ಮಠ ಮತ್ತು ದತ್ತ ಪೀಠ ದೇವಾಲಯಗಳಿಂದ ಮಣ್ಣನ್ನು ಕಳುಹಿಸಲಾಗಿದೆ ಎಂದು ಬಸವರಾಜ್ ಹೇಳಿದ್ದಾರೆ.