ಉಡುಪಿಯ ಮರಳು, ಸಿಮೆಂಟ್ ಹಗರಣವನ್ನು ಅಧೀವೇಶನದಲ್ಲಿ ಪ್ರಶ್ನಿಸುತ್ತೇವೆ: ಗುಂಡೂರಾವ್

ಉಡುಪಿ(ಉಡುಪಿ ಟೈಮ್ಸ್ ವರದಿ): ಆಟೋ ಚಾಲಕರಿಗೆ, ಕ್ಷೌರಿಕರಿಗೆ ಸಹಾಯ ಧನ ಇನ್ನೂ ಸರಿಯಾಗಿ ನೀಡದ ರಾಜ್ಯ ಸರ್ಕಾರ, ಇನ್ನೂ ಅವರಲ್ಲಿ ದಾಖಲೆ ಕೇಳುವುದರಲ್ಲೇ ತೊಡಗಿದೆ. ಇವರೇನು ಸಂಕಷ್ಟದಲ್ಲಿದ ಜನರಿಗೆ ಲೋನ್ ನೀಡುತ್ತಿದ್ದಾರಾ ಎಂದು ರಾಜ್ಯ ಸರ್ಕಾರವನ್ನು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಾರವಾಗಿ ಪ್ರಶ್ನಿಸಿದ್ದಾರೆ.

ಸೋಮವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು, ರಾಜ್ಯದಲ್ಲಿ ಕೊರೋನಾ ಹೆಸರಿನಲ್ಲಿ ಖರೀದಿಸಿದ ಸಾಧನಗಳಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಚಾರವಾಗಿದ್ದು, ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ. ಬಿಜೆಪಿ ಪಕ್ಷದ ಮಾಜಿ ಸಚಿವರೇ ಕಿಟ್ ಖರೀದಿಯಲ್ಲಿ ಹಗರಣವಾಗಿದೆಂದು ಹೇಳಿದ್ದಾರೆ. ಆದ್ದರಿಂದ ಇದಕ್ಕಿಂತ ದೊಡ್ಡ ಸಾಕ್ಷೀ ಬೇಕಾ ಎಂದು ಪ್ರಶ್ನಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಕಾರ್ಕಳ ಶಾಸಕರ ಸಿಮೆಂಟ್ ಹಗರಣ ಬಗ್ಗೆ ಮುಂದಿನ ವಿಧಾನಸಭಾ ಅಧೀವೇಶನದಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದೆ. ಅಧಿಕಾರಿಗಳ ಅಧಿಕಾರ ದುರುಪಯೋಗಪಡಿಸಿ ಬಿಜೆಪಿ ಜಿಲ್ಲೆಯಲ್ಲಿ ಹಗಲು ದರೋಡೆ ಮಾಡುತ್ತಿದೆ. ಶಾಸಕರು ತಮ್ಮ ಸ್ವಾರ್ಥಕ್ಕಾಗಿ ಇಲಾಖೆಗಳಿಗೆ ಬಳಸುವ ಸಿಮೆಂಟ್ ಅನ್ನು ತಮ್ಮ ಸ್ವಂತ ಉಪಯೋಗಕ್ಕೆ ಬಳಸುತ್ತಾರೆಂದಾದರೆ ಇವರಿಗೆ ಯಾವ ನೈತಿಕತೆ ಇದೆ ಎಂದು ಗುಂಡೂರಾವ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವೆ ಜಯಮಾಲಾ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಯು. ಆರ್. ಸಭಾಪತಿ, ಮುಖಂಡರಾದ ಮುರಳಿ ಶೆಟ್ಟಿ, ಜಿ.ಎ.ಬಾವ, ಎಂ.ಎ.ಗಫೂರ್, ದಿನೇಶ್ ಪುತ್ರನ್, ವೆರೋನಿಕ ಕರ್ನೆಲಿಯೋ, ಅಬ್ದುಲ್ ಅಜೀಜ್, ನವೀನ್ ಚಂದ್ರ ಶೆಟ್ಟಿ, ಕ್ರಷ್ಣಮೂರ್ತಿ ಆಚಾರ್ಯ, ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ರೋಶನಿ ಒಲಿವರ್, ಹರೀಶ್ ಕಿಣಿ, ಭಾಸ್ಕರ್ ರಾವ್ ಕಿದಿಯೂರು, ಯತೀಶ್ ಕರ್ಕೆರ, ದೇವಿಪ್ರಸಾದ್ ಶೆಟ್ಟಿ, ಡಾ. ಸುನೀತ ಶೆಟ್ಟಿ, ವಿಘ್ನೇಶ್ ಕಿಣಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!