ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟ

ನವದೆಹಲಿ: ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಕಳೆದ ಮೇ 24ರಂದು ಹೊರಡಿಸಲಾಗಿದ್ದ ಮಾರ್ಗಸೂಚಿಗೆ ಕೆಲವು ಬದಲಾವಣೆಗಳನ್ನು ಮಾಡಿ ಹೊಸ ಮಾರ್ಗಸೂಚಿ ಹೊರಡಿಸಲಾಗಿದ್ದು ಅದು ಆಗಸ್ಟ್ 8ರಿಂದ ಜಾರಿಗೆ ಬರಲಿದೆ.

ಆಗಸ್ಟ್ 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಹಿಂದೆ ಸಾಗರೋತ್ತರ ವಿಮಾನ ಹಾರಾಟಗಳನ್ನು ಜುಲೈ 31ರವರೆಗೆ ಮಾತ್ರ ನಿರ್ಬಂಧಿಸಲಾಗಿತ್ತು. ಈ ನಿರ್ಬಂಧ ಅಂತಾರಾಷ್ಟ್ರೀಯ ಕಾರ್ಗೊ ಕಾರ್ಯಾಚರಣೆ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ ಅನುಮೋದನೆ ನೀಡಿರುವ ವಿಶೇಷ ವಿಮಾನಗಳಿಗೆ ಅನ್ವಯವಾಗುವುದಿಲ್ಲ.

ಹೊಸ ಮಾರ್ಗಸೂಚಿಯಲ್ಲಿ ಏನಿದೆ: 1.ಪ್ರಯಾಣಕ್ಕೆ 72 ಗಂಟೆ ಮುನ್ನ newdelhiairport.in ವೆಬ್ ಸೈಟ್ ನಲ್ಲಿ ಪ್ರಯಾಣಿಕರು ಸ್ವಘೋಷಿತ ಅರ್ಜಿಯನ್ನು ತುಂಬಬೇಕು.
2. ವೆಬ್ ಸೈಟ್ ನಲ್ಲಿ ತಾವು ಪ್ರಯಾಣ ಮಾಡಿದ ನಂತರ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡುತ್ತೇವೆ ಎಂದು ಬರೆದುಕೊಡಬೇಕು. ಅಂದರೆ ಅದು 7 ದಿನ ಪಾವತಿ ಮಾಡಿದ ಸಾಂಸ್ಥಿಕ ಕ್ವಾರಂಟೈನ್ ಮತ್ತು ಉಳಿದ 7 ದಿನ ಹೋಂ ಕ್ವಾರಂಟೈನ್.
3. ನೆಗೆಟಿವ್ ಆರ್ ಟಿ-ಪಿಸಿಆರ್ ತಪಾಸಣೆ ವರದಿಯನ್ನು ಪ್ರಯಾಣ ಮಾಡಿ ಬಂದ ನಂತರ ತೋರಿಸಿದರೆ ಸಾಂಸ್ಥಿಕ ಕ್ವಾಂರಟೈನ್ ನಿಂದ ವಿನಾಯ್ತಿ ಪಡೆಯಬಹುದು.
4. ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣ ಮಾಡಿ ಬಂದಿಳಿದ ನಂತರ ರಾಜ್ಯ ಸರ್ಕಾರಗಳು ತಮ್ಮ ಶಿಷ್ಟಾಚಾರ ಪ್ರಕಾರ ಕ್ವಾರಂಟೈನ್ ಗೆ ಒಳಪಡಿಸುವ ಪ್ರಕ್ರಿಯೆ ಮಾಡಬಹುದು.

Leave a Reply

Your email address will not be published. Required fields are marked *

error: Content is protected !!