ದನಗಳ್ಳನಿಗೆ ಪರಿಹಾರ ಕೊಟ್ಟಿರಲಿಲ್ಲವೇ? ಆಗ ಕೊಂದವರು, ಕೊಲೆಯಾದವರು ಪ್ರಶ್ನೆ ಕಾಡಲಿಲ್ಲವೇ?- ಬಿಜೆಪಿ
ಬೆಂಗಳೂರು: ಸಿದ್ದರಾಮಯ್ಯನವರೇ, ನೀವು ಸಿಎಂ ಆಗಿದ್ದಾಗ ದನಗಳ್ಳನ ಮೇಲೆ ಗುಂಡು ಹಾರಿಸಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ, ದನಗಳ್ಳನಿಗೆ 10 ಲಕ್ಷ ಪರಿಹಾರ ಕೊಟ್ಟಿರಲಿಲ್ಲವೇ? ಆಗ ಕೊಂದವರು, ಕೊಲೆಯಾದವರು ಎಂಬ ಪ್ರಶ್ನೆ ಕಾಡಲಿಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿದ್ದು, ಪರಿಹಾರ ನೀಡುವಾಗ ಕೊಲೆಯಾದವರಿಗಿಂತ ಕೊಂದವರು ಯಾರು ಎಂಬುದನ್ನು ಬಿಜೆಪಿ ನೋಡುತ್ತದೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.
ಸಿದ್ದರಾಮಯ್ಯನವರೇ ನೀವು ಸಿಎಂ ಆಗಿದ್ದಾಗ ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಾದಾಗ ನೈತಿಕತೆಯ ಪ್ರಶ್ನೆ ನಿಮ್ಮನ್ನು ಬಾಧಿಸಲಿಲ್ಲವೇ? ಈಗ ಅನ್ಯರ ಬಗ್ಗೆ ಮಾತನಾಡುವಾಗ ನಿಮಗೆ ಈ ಎಲ್ಲ ಪ್ರಶ್ನೆಗಳು ಎದುರಾಗುತ್ತವೆಯಲ್ಲವೇ? ‘ಬದನೆಕಾಯಿ ತಿನ್ನುವುದಕ್ಕೆ, ಭಾಷಣ ವೇದಿಕೆಗೆ’ ಎಂಬಂತಾಯ್ತು ನಿಮ್ಮ ಧೋರಣೆ ಎಂದಿರುವ ಬಿಜೆಪಿ, ಸುಳ್ಳುರಾಮಯ್ಯ, ಬುರುಡೆರಾಮಯ್ಯ ಎನ್ನುವ ಹ್ಯಾಷ್ಟ್ಯಾಗ್ ಬಳಸಿದೆ.
ಮತ್ತೊಂದು ಟ್ವೀಟ್ನಲ್ಲಿ, ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಕಂಡ ‘ಸಾಲದ ಹರಿಕಾರ’ ಎಂದರೆ ತಪ್ಪಾಗಲಾರದು. ಸಿದ್ದರಾಮಯ್ಯ ಅವಧಿಯಲ್ಲಿ ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಯಿತು. ವಿತ್ತೀಯ ಶಿಸ್ತಿನಲ್ಲಿ ಬಜೆಟ್ ಮಂಡಿಸಿದ್ದೇನೆ ಎಂದು ಬಡಾಯಿ ಕೊಚ್ಚಿದರೂ, ಬದ್ಧತಾ ವೆಚ್ಚ ಸರಿದೂಗಿಸುವುದಕ್ಕೂ ಕಷ್ಟವಾಗಿತ್ತು ಎಂಬುದು ನಿಜವಲ್ಲವೇ? ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬೆಳೆನಷ್ಟ ಹಾಗೂ ಸಾಲ ಬಾಧೆಯಿಂದ ರೈತರ ಸರಣಿ ಆತ್ಮಹತ್ಯೆ ನಡೆಯಿತು. ಆದರೆ ಸಿದ್ದರಾಮಯ್ಯ ಅವರಿಗೆ ಈ ಸತ್ಯವನ್ನು ರಾಜ್ಯದ ಜನತೆಗೆ ತಿಳಿಸಲು ಇಷ್ಟವಿರಲಿಲ್ಲ. ಹೀಗಾಗಿ ‘ಅದು ಆತ್ಮಹತ್ಯೆ ಅಲ್ಲಾರಿ, ಕುಡಿದು ಸತ್ತಿದ್ದು’ ಎಂದು ಸಾವಿನ ವಿಚಾರದಲ್ಲೂ ಸುಳ್ಳು ಹೇಳಿರಲಿಲ್ಲವೇ? ಎಂದು ಕಿಡಿಕಾರಿದೆ.