ವಿಶಾಖಪಟ್ಟಣಂನಲ್ಲಿ ಕ್ರೇನ್ ದುರಂತ: ಕನಿಷ್ಠ 10 ಮಂದಿ ಸಾವು, ಓರ್ವ ಗಂಭೀರ!
ವಿಶಾಖಪಟ್ಟಣಂ: ಈ ಹಿಂದೆ ವಿಷಾನಿಲ ಸೋರಿಕೆ ಪ್ರಕರಣದಿಂದ ಸುದ್ದಿಯಾಗಿದ್ದ ವಿಶಾಖಪಟ್ಟಣಂನಲ್ಲಿ ಮತ್ತೊಂದು ಪ್ರಮಾದ ಘಟಿಸಿದ್ದು, ಕ್ರೇನ್ ಕುಸಿದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ವಿಶಾಖಪಟ್ಟಣಂನ ಹಿಂದೂಸ್ತಾನ್ ಷಿಪ್ ಯಾರ್ಡ್ ಲಿಮಿಟೆಡ್ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಈ ವೇಳೆ ಅಲ್ಲಿದ್ದ 10 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ದಿನ ನಿತ್ಯದಂತೆಯೇ ಇಂದೂ ಕೂಡ ಶಿಪ್ ಯಾರ್ಡ್ ನಲ್ಲಿ ಲೋಡ್ ಅನ್ ಲೋಡ್ ಕಾರ್ಯ ನಡೆಯುತ್ತಿದ್ದಾಗ ಇದ್ದಕಿದ್ದ ಹಾಗೆ ಕ್ರೇನ್ ಕುಸಿದು ಬಿದ್ದಿದೆ. ಈ ವೇಳೆ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಕ್ರೇನ್ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ಜಾರೆ. ಪ್ರಸ್ತುತ ಕ್ರೇನ್ ಅವಶೇಷಗಳನ್ನು ತೆರವುಗೊಳಿಸಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗಿದೆ.
ಇನ್ನು ದುರಂತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಡಿಸಿಪಿ ಸುರೇಶ್ ಬಾಬು ಅವರು ತನಿಖೆ ನಡೆಸವುದಾಗಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಇದೇ ವಿಶಾಖಪಟ್ಟಣಂನಲ್ಲಿ ಎಲ್ ಜಿ ಪಾಲಿಮರ್ ಕಾರ್ಖಾನೆಯಲ್ಲಿ ಸಂಭವಿಸಿದ್ದ ವಿಷಾನಿಲ ಸೋರಿಕೆ ಮತ್ತು ಗ್ಯಾಸ್ ಟ್ಯಾಂಕ್ ಸ್ಫೋಟ ಪ್ರಕರಣಗಳಲ್ಲಿ ಹಲವರು ಸಾವನ್ನಪ್ಪಿದ್ದರು. ಈ ಘಟನೆಗಳು ಹಸಿರಾಗಿರುವಂತೆಯೇ ಮತ್ತೊಂದು ದುರಂತ ಸಂಭವಿಸಿದೆ.