ಎಲ್‌ಐಸಿ: ವಾರ್ಷಿಕ ಆದಾಯದಲ್ಲಿ ಶೇ.9.83 ಹೆಚ್ಚಳ

ಮುಂಬಯಿ: ಸರಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) 2019-20ನೇ ಸಾಲಿನಲ್ಲಿ 6,15,882.94 ಕೋ. ರೂ. ಆದಾಯವನ್ನು ಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 5,60,784.39 ಕೋ. ರೂ. ಆದಾಯ ಗಳಿಸಿದ್ದ ನಿಗಮ ಈ ಬಾರಿ ಶೇ. 9.83ರಷ್ಟು ಹೆಚ್ಚಿನ ಆದಾಯವನ್ನು ಗಳಿಸಿದೆ.

ಈ ವರ್ಷದ ಮಾರ್ಚ್‌ ಅಂತ್ಯಕ್ಕೆ ಮುಕ್ತಾಯಗೊಂಡ 2019-20ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ನಿಗಮವು ಬಿಡುಗಡೆ ಮಾಡಿದೆ. 2018-19ನೇ ಸಾಲಿನಲ್ಲಿ ಎಲ್‌ಐಸಿಯ ಆಸ್ತಿಯು 31,11,847.28 ಕೋ. ರೂ. ಗಳಾಗಿದ್ದರೆ ಈ ಬಾರಿ ಅದು 31,96,214.81 ಕೋ. ರೂ.ಗಳಿಗೆ ಏರಿಕೆಯಾಗಿದ್ದು, ಶೇ. 2.71ರಷ್ಟು ಬೆಳವಣಿಗೆಯನ್ನು ಕಂಡಿದೆ.

ಮೊದಲ ವರ್ಷದ ಪ್ರೀಮಿಯಂ ಸಂಗ್ರಹದಲ್ಲಿ ಏರಿಕೆ
2019-20ನೇ ಸಾಲಿನಲ್ಲಿ ಎಲ್‌ಐಸಿಯು 1,77,977.07 ಕೋ. ರೂ.ಗಳನ್ನು ಮೊದಲ ವರ್ಷದ ಪ್ರೀಮಿಯಂ ಆಗಿ ಸಂಗ್ರಹಿಸಿ, ಶೇ. 25.17ರಷ್ಟು ಹೆಚ್ಚಳ ದಾಖಲಿಸಿದೆ. ಇದೇ ಮೊದಲ ಬಾರಿಗೆ ಒಟ್ಟಾರೆ 1,26,696.21 ಕೋ. ರೂ.ಗಳ ಹೊಸ ವ್ಯವಹಾರ ಪ್ರೀಮಿಯಂ ಆದಾಯವನ್ನು ಸಂಗ್ರಹಿಸಿದೆ. ಇದು 2018-19ನೇ ಸಾಲಿಗೆ ಹೋಲಿಸಿದಲ್ಲಿ ಶೇ. 39.46ರಷ್ಟು ಹೆಚ್ಚಳವಾಗಿದೆ.

2020ರ ಮಾರ್ಚ್‌ ಅಂತ್ಯಕ್ಕೆ 3,79,062.56 ಕೋ. ರೂ. ಗಳಷ್ಟು ಒಟ್ಟು ಪ್ರೀಮಿಯಂ ಆದಾಯವನ್ನು ಕಲೆಹಾಕುವ ಮೂಲಕ ಶೇ. 12.42ರಷ್ಟು ವೃದ್ಧಿಯನ್ನು ಕಂಡಿದೆ. ಒಟ್ಟು 2,54,222.27 ಕೋ.ರೂ. ಮೊತ್ತವನ್ನು ವಿಮಾ ಪಾಲಿಸಿದಾರರಿಗೆ ವಾಪಸ್‌ ನೀಡಲಾಗಿದ್ದು, ಹಿಂದಿನ ಸಾಲಿಗೆ ಹೋಲಿಸಿದಲ್ಲಿ ಶೇ. 1.31ರಷ್ಟು ಹೆಚ್ಚಳ ದಾಖಲಾಗಿದೆ.

ಸರಳ ವ್ಯವಸ್ಥೆಗಳ ಪರಿಚಯ
ಎಲ್‌ಐಸಿಯು ತನ್ನ ಗ್ರಾಹಕರಿಗೆ ಹಲವಾರು ಉತ್ತಮ ವಿಮಾ ಸೇವೆಗಳನ್ನು ಒದಗಿಸುತ್ತಿದ್ದು, ವಿಮಾ ಪಾಲಿಸಿಗಳ ಪ್ರೀಮಿಯಂ ಪಾವತಿಯಲ್ಲಿಯೂ ಅತಿ ಸರಳ ವ್ಯವಸ್ಥೆಗಳನ್ನು ಪರಿಚಯಿಸಿದೆ. ಅಷ್ಟೇ ಅಲ್ಲದೆ ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಡಿಜಿಟಲ್‌ ವ್ಯವಸ್ಥೆ ಮೂಲಕ ಪ್ರೀಮಿಯಂ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಕಳೆದ ವರ್ಷ ಎಲ್‌ಐಸಿ ಪಾಲಿಸಿಗಳ ಪ್ರೀಮಿಯಂ ಪಾವತಿಗೆ ಡಿಜಿಟಲ್‌ ವ್ಯವಸ್ಥೆಯನ್ನು ಬಳಸಿದ ಗ್ರಾಹಕರ ಸಂಖ್ಯೆಯಲ್ಲಿ ಶೇ.36ರಷ್ಟು ಏರಿಕೆಯಾಗಿದೆ.

ಯಾವುದೇ ಪಾಲಿಸಿದಾರರು ಕೋವಿಡ್‌ಗೆ ತುತ್ತಾದ ಸಂದರ್ಭದಲ್ಲಿ ಆ ಗ್ರಾಹಕನಿಗೆ ನಿಗಮದಿಂದ ಪಾವತಿಯಾಗಬೇಕಿರುವ ವಿಮಾ ಮೊತ್ತವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಈವರೆಗೆ 561 ಪಾಲಿಸಿದಾರರಿಗೆ 26.74 ಕೋ. ರೂ. ವಿಮಾ ಮೊತ್ತವನ್ನು ಪಾವತಿಸಲಾಗಿದೆ.

ಇಷ್ಟು ಮಾತ್ರವಲ್ಲದೆ ಕೆಲವೊಂದು ತುರ್ತು ಸಂದರ್ಭಗಳಲ್ಲಿ ವಿಮಾ ಮೊತ್ತದ ಮರುಪಾವತಿ ವ್ಯವಸ್ಥೆಯ ನಿಯಮಾವಳಿಗಳಲ್ಲಿ ಸಡಿಲಿಕೆಗಳನ್ನೂ ಮಾಡಲಾಗಿದೆ. ದೇಶದ ವಿಮಾ ಕಂಪೆನಿಗಳಲ್ಲಿ ಅಗ್ರ ಸ್ಥಾನದಲ್ಲಿರುವ ಎಲ್‌ಐಸಿಯು ದೇಶದ ವಿಮಾ ಪಾಲಿಸಿಗಳ ಮಾರುಕಟ್ಟೆಯಲ್ಲಿ ಶೇ. 75.90ರಷ್ಟು ಪಾಲನ್ನು ಹೊಂದಿದ್ದರೆ ಮೊದಲ ವರ್ಷದ ಪ್ರೀಮಿಯಂನಲ್ಲಿ ಶೇ. 68.74ರಷ್ಟು ಪಾಲನ್ನು ಹೊಂದಿದೆ. 

Leave a Reply

Your email address will not be published. Required fields are marked *

error: Content is protected !!