ಕೋವಿಡ್-19 ಮುಖ್ಯ ಕಾರ್ಯಕರ್ತರಿಗೆ ವೇತನ ನೀಡುವಲ್ಲಿ ಕರ್ನಾಟಕ ಸೇರಿ 4 ರಾಜ್ಯಗಳು ವಿಫಲ: ಕೇಂದ್ರ
ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್ ಮತ್ತು ತ್ರಿಪುರಾ ರಾಜ್ಯಗಳು ಕೋವಿಡ್-19 ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.
ಕೋವಿಡ್-19ನ ಈ ಸಂಕಷ್ಟ ಕಾಲದಲ್ಲಿ ಹಗಲಿರುಳು ಕೊರೋನಾ ಸೋಂಕಿನ ವಿರುದ್ಧ ಮತ್ತು ಸೋಂಕಿತರ ಆರೋಗ್ಯ ಸುಧಾರಿಸಲು ಶ್ರಮಿಸುತ್ತಿರುವ ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸರಿಯಾದ ಸಮಯಕ್ಕೆ ವೇತನ ನೀಡುವಂತೆ ಅಗತ್ಯ ಕ್ರಮ ವಹಿಸಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು.
ಕೋವಿಡ್-19 ಆರೋಗ್ಯ ಸೇವೆ ಕಾರ್ಯಕರ್ತರಿಗೆ ಸೂಕ್ತ ಸಮಯಕ್ಕೆ ಕಡ್ಡಾಯವಾಗಿ ವೇತನ ಬಿಡುಗಡೆ ಮಾಡಬೇಕೆಂದು ಮತ್ತು ಆದೇಶವನ್ನು ಪಾಲಿಸದಿದ್ದರೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಅಪರಾಧವಾಗುತ್ತದೆ ಎಂದು ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ಕಳೆದ ತಿಂಗಳು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು.