ಚುನಾವಣೆ ಬಳಿಕ ಇಂಧನ ಬೆಲೆ ಏರಿಕೆಯಾದರೆ ರಾಷ್ಟ್ರವ್ಯಾಪಿ ಹೋರಾಟ: ಕಾಂಗ್ರೆಸ್ ಎಚ್ಚರಿಕೆ
ನವದೆಹಲಿ: ವಾಣಿಜ್ಯ ಉದ್ದೇಶಗಳಿಗೆ ಬಳಸುವ ಎಲ್ಪಿಜಿ ಸಿಲಿಂಡರ್ ಮತ್ತು ಹಾಲಿನ ಬೆಲೆ ಏರಿಕೆ ಕುರಿತು ಮಂಗಳವಾರ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿಧಾನಸಭಾ ಚುನಾವಣೆಯ ನಂತರ ಇಂಧನ ಬೆಲೆ ಏರಿಕೆಯಾದರೆ ಬೀದಿಗಿಳಿದು ರಾಷ್ಟ್ರವ್ಯಾಪಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಮತ್ತೆ ಎಲ್ಪಿಜಿ ಸಿಲಿಂಡರ್ ದರ ಏರಿಕೆ ಮಾಡುವ ಮೂಲಕ ಮೋದಿ ಸರ್ಕಾರವು, ಸಂಕಷ್ಟದಿಂದ ಬಳಲುತ್ತಿರುವ ಸಾಮಾನ್ಯ ಜನರಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಇಂದು ಎಲ್ಪಿಜಿ, ನಾಳೆ ಪೆಟ್ರೋಲ್-ಡೀಸೆಲ್’ ಎಂದು #KiskeAchheDin ಎಂಬ ಹ್ಯಾಷ್ಟ್ಯಾಗ್ ಹಾಕಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಮಾತನಾಡಿ, ‘ಮಾರ್ಚ್ ಮೊದಲ ದಿನದಂದು ಹಾಲಿನ ದರವನ್ನು ತಲಾ 2 ರೂ ಗಳಷ್ಟು ಹೆಚ್ಚಿಸಲಾಗಿದೆ. ಇದರಿಂದ ಮಕ್ಕಳು ಮತ್ತು ಮಹಿಳೆಯರಿಗೆ ಹೊಡೆತ ಬಿದ್ದಿದೆ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ದೆಹಲಿಯಲ್ಲಿ 105 ರೂ ಹೆಚ್ಚಿಸಿದ್ದು, ಇದರ ಬೆಲೆ 2000 ರೂ ದಾಟಿದೆ. ಚುನಾವಣೆ ಮುಗಿದ ನಂತರ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಕೂಡ ಶೇ.27 ರಷ್ಟು ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.