ಉಕ್ರೇನ್ ನಲ್ಲಿ ಸಿಲುಕಿಕೊಂಡ 15,000ಕ್ಕೂ ಅಧಿಕ ವಿದ್ಯಾರ್ಥಿಗಳು- ಸರ್ಕಾರ ಮಾರ್ಗಸೂಚಿ ಹೊರಡಿಸುವುದು ಬಿಟ್ಟು ಬೇರೇನನ್ನೂ ಮಾಡುತ್ತಿಲ್ಲ

ದೆಹಲಿ ಮಾ.1: ಉಕ್ರೇನ್ ಮೇಲೆ ರಷ್ಯಾ ದಾಳಿ ಬಳಿಕ ಉಕ್ರೇನ್ ನಲ್ಲಿ ನೆಲೆಸಿದ್ದ ನಿವಾಸಿಗಳ ಜೊತೆಗೆ ಶಿಕ್ಷಣ, ಉದ್ಯೋಗ ಅರಸಿಕೊಂಡು ಹೋದ ಭಾರತ ಸೇರಿದಂತೆ ಅನೇಕ ದೇಶಗಳ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉಕ್ರೇನ್ ನಲ್ಲಿ ಸುಮಾರು 15,000ಕ್ಕೂ ಅಧಿಕ ಮಂದಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಈ ಪೈಕಿ ಕರ್ನಾಟಕದ 346 ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ರಷ್ಯಾದ ಅತಿಕ್ರಮಣಕ್ಕೆ ಗುರಿಯಾಗಿರುವ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಪಡುತ್ತಿರುವ ಪಾಡು ತುಂಬಾ ಮನಕಲುಕುವಂತಿದ್ದು, ವಿದ್ಯಾರ್ಥಿಗಳು ಪ್ರತಿ ದಿನ ಆತಂಕದಲ್ಲೇ ದಿನ ಕಳೆಯುವಂತಾಗಿದೆ.

ಉಕ್ರೇನ್ ಅನ್ನು ಬೆಂಬಲಿಸಿಲ್ಲ ಎಂದು ಉಕ್ರೇನ್ ಜನರು ಮತ್ತು ಸೈನಿಕರು ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ರಷ್ಯಾವನ್ನು ಬೆಂಬಲಿಸಿಲ್ಲ ಎಂದು ರಷ್ಯಾ ಸೈನಿಕರು ಭಾರತೀಯ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಎರಡು ದೇಶಗಳ ನಡುವಿನ ಕಿತ್ತಾಟದಲ್ಲಿ ಭಾತೀಯ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

ಉಕ್ರೇನ್ ನಲ್ಲಿ ಸಿಲುಕಿರುವ ದೇಶದ ವಿದ್ಯಾರ್ಥಿಗಳಲ್ಲಿ ಅನೇಕ ಮಂದಿ ಈಗಾಗಲೇ ದೇಶಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ, ಆದರೆ ಅಲ್ಲಿ ಸಿಲುಕಿರುವ ಇತರ ವಿದ್ಯಾರ್ಥಿಗಳ ಪಾಡು ಮಾತ್ರ ಅತ್ಯಂತ ಶೋಚನೀಯ ವಾಗಿದೆ. ಉಕ್ರೇನ್‍ನ ವಿವಿಧ ನಗರಗಳಿಂದ ಹೊರಟು ಪೆÇೀಲೆಂಡ್ ಗಡಿ ತಲುಪಿರುವ ಭಾರತೀಯ ವಿದ್ಯಾರ್ಥಿಗಳನ್ನು ಅಲ್ಲಿ ತಡೆದು ನಿಲ್ಲಿಸಲಾಗಿದೆ. ಸುರಿಯುತ್ತಿರುವ ಹಿಮದಲ್ಲಿ ಗಡಿಯಲ್ಲಿ ನೂರಾರು ವಿದ್ಯಾರ್ಥಿಗಳು ನಿಂತಿರುವ ಚಿತ್ರಗಳು, ಉಕ್ರೇನ್ ಸೈನಿಕರು ಎಚ್ಚರಿಕೆಯ ಸಂಕೇತವಾಗಿ ಗುಂಡು ಹಾರಿಸುವುದು, ಭಾರತೀಯ ವಿದ್ಯಾರ್ಥಿಗಳ ಗುಂಪನ್ನು ಚದುರಿಸಲು ಬಲ ಪ್ರಯೋಗ ಮಾಡುತ್ತಿರುವುದು,  ವಿದ್ಯಾರ್ಥಿನಿಯರು ಸೈನಿಕರ ಕಾಲಿಗೆ ಬಿದ್ದು ಗಡಿ ದಾಟಲು ಅವಕಾಶ ನೀಡುವಂತೆ ಬೇಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿದ್ದು, ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಸ್ಥಿತಿ ಎಷ್ಟರ ಮಟ್ಟಿಗೆ ಶೋಚನೀಯವಾಗಿದೆ ಎಂಬೂದನ್ನು ತಿಳಿಸುತ್ತಿದೆ.

ರಷ್ಯಾ ಅತಿಕ್ರಮಣದ ವಿಚಾರದಲ್ಲಿ ಭಾರತ ಸರ್ಕಾರವು ತಟಸ್ಥ ನೀತಿಯ ಅನುಸರಿಸುತ್ತಿರುವುದು ಭಾರತೀಯ ವಿದ್ಯಾರ್ಥಿಗಳ ಪಾಲಿಗೆ ಉರುಳಾಗಿ ಪರಿಣಮಿಸಿದೆ. ಯಾಕೆಂದರೆ ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವವರ ಪಾಡು ಒಂದೆಡೆಯಾದರೆ ಮತ್ತೊಂದೆಡೆ ಉಕ್ರೆನ್ ತೊರೆಯಲು ನಿರ್ಧರಿಸಿ ಹೊರಟಿರುವವ ರಿಗೆ ಗಡಿಯಲ್ಲೂ ನರಕ ದರ್ಶನ ವಾಗುತ್ತಿದೆ. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಹಲವು ವಿಶ್ವವಿದ್ಯಾನಿಲಯ ಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ಬರಲು ಹರಸಾಸಹ ಮಾಡುತ್ತಿದ್ದು, ಗಡಿಯಲ್ಲಿ ಪ್ರದೇಶದಲ್ಲಿ ಅತಂತ್ರರಾಗಿದ್ದಾರೆ. ಮಾತ್ರವಲ್ಲ ದೆ ರೈಲು, ಕಾರು ಅಥವಾ ಬಸ್‍ನಲ್ಲಿ ಯುದ್ಧಪೀಡಿತ ಪ್ರದೇಶಗಳಿಂದ ತಪ್ಪಿಸಿಕೊಂಡಿರುವ ಹಲವು ವಿದ್ಯಾರ್ಥಿಗಳು ದೇಶದ ಗಡಿಬೇಲಿ ದಾಟಲು ಹಲವು ಮೈಲುಗಳನ್ನು ನಡೆದಿದ್ದಾರೆ.

ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಆಹಾರ ನೀರಿಗೂ ಕಷ್ಟ ಪಡುವಂತಾಗಿದೆ. ಉಕ್ರೇನ್ ನಲ್ಲಿರೋ ಭಾರತೀಯಾ ರಾಯಭಾರಿ ಕಚೇರಿ ಸೂಚನೆ ಮೇರೆಗೆ  ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಉಕ್ರೇನ್ ಇವಾನೋ ಫ್ರಾಂಕ್ ನಿಂದ ಸ್ಲೋವಾಕಿಯಾಗೆ ಹೊರಟಿದ್ದರು. ಆದರೆ ಅಷ್ಟರಲ್ಲೇ, ಸ್ಲೋವೋಕಿಯಾ ಗಡಿಯಲ್ಲಿ ಭಾರತೀಯರನ್ನ ಸ್ಲೋಕಿಯಾ ಪಡೆ ತಡೆದಿದೆ. ಇತ್ತ ಚಳಿಯನ್ನೂ ಲೆಕ್ಕಿಸದೇ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳುವ ಸಲುವಾಗಿ ಮೈಲು ಗಟ್ಟಲೆ ನಡೆದುಕೊಂಡೇ ಗಡಿಯತ್ತ ಬರುತ್ತಿದ್ದಾರೆ. ಆದರೆ ಗಡಿಯತ್ತ ಬರುತ್ತಿರುವವರನ್ನು ಸೈನಿಕರು ಥಳಿಸಿ ಹಿಂಸೆ ನೀಡುತ್ತಿರುವ ದೃಶ್ಯಗಳೂ ಭಾರತೀಯ ವಿದ್ಯಾರ್ಥಿಗಳ ಮೇಲೆ ಅಲ್ಲಿನ ಸೈನಿಕರು ಅಟ್ಟಹಾಸ ಮೆರೆಯುತ್ತಿರುವುದನ್ನು ತೋರಿಸುತ್ತಿದೆ. ಗಡಿಯಲ್ಲಿ ಅಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಬೇರೆಲ್ಲಾ ದೇಶಗಳ ವಿದ್ಯಾರ್ಥಿಗಳನ್ನು ಗೌರವಯುತವಾಗಿ ಗಡಿ ದಾಟಿಸಲಾಗುತ್ತಿದೆ. ಆದರೆ ಭಾರತದ ವಿದ್ಯಾರ್ಥಿಗಳನ್ನು ಬಿಡುತ್ತಿಲ್ಲ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ನೀರು, ಆಹಾರ ಏನೂ ಇಲ್ಲದೆ ಕಳೆದ ಎರಡು ದಿನಗಳಿಂದ ಇಲ್ಲಿನ ಪೆಟ್ರೋಲ್ ಬಂಕ್‍ನಲ್ಲಿಯೇ ವಿದ್ಯಾರ್ಥಿಗಳು ಉಳಿದು ಕೊಳ್ಳುವಂತಾಗಿದೆ.

ಈ ನಡುವೆ ಉಕ್ರೇನ್‍ನಲ್ಲಿರುವ ವಿದ್ಯಾರ್ಥಿಗಳನ್ನು ತೆರವು ಮಾಡಲು ಭಾರತ ಸರ್ಕಾರವು ಗರಿಷ್ಠ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಆದರೆ ವಾಸ್ತವ ಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಅಲ್ಲಿಂದ ತೆರವು ಗೊಳಿಸುವಲ್ಲಿ ಸರಕಾರ ವಿಳಂಬ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾದಂತಹ ಕೆಲವೊಂದು ಸನ್ನಿವೇಶಗಳೂ ನಡೆದಿದೆ. ಸರಕಾರ ಹೇಗಾದರು ಮಾಡಿ ಗಡಿಗೆ ಬನ್ನಿ ಎಂದು ಹೇಳುತ್ತಿದ್ದೆ. ಈ ವಿಚಾರವಾಗಿ ರಾಯಭಾರ ಕಚೇರಿಯೂ ಮಾರ್ಗಸೂಚಿ ಹೊರಡಿಸಿದೆ. ಆದರೆ  ವಿದ್ಯಾರ್ಥಿಗಳು ಇರುವ ಸ್ಥಳದಿಂದ 800 ಕಿ.ಮೀ. ದೂರದಲ್ಲಿ ಗಡಿ ಪ್ರದೇಶ ಇದೆ. ಅಲ್ಲಿಗೆ ತಲುಪುವುದು ಹೇಗೆ ಎಂಬ ಬಗ್ಗೆ ಮಾರ್ಗದರ್ಶನ ನೀಡಲು ಸರಕಾರದ ಪರವಾದ ಯಾವುದೇ ಒಬ್ಬ ಸಿಬ್ಬಂದಿಯೂ ಇಲ್ಲದಿರುವುದು ಸುದ್ದಿ ಮಾಧ್ಯಮಗಳಿಂದ ತಿಳಿದು ಬಂದಿದೆ. ಮಾತ್ರವಲ್ಲದೆ ಕೀವ್‍ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳು ಭಾರತ ಸರಕಾರದ ನೆರವಿಗಾಗಿ ರಾಯಭಾರ ಕಚೇರಿ ಕರೆ ಮಾಡಿದರೂ ಯಾರೂ ಕರೆ ಸ್ವೀಕರಿಸುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬಂದಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತ ವಿದ್ಯಾರ್ಥಿಗಳು ರಾಯಭಾರ ಕಚೇರಿ ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗೂ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್‍ನಿಂದ ತೆರವು ಮಾಡುವ ಭಾರತ ಸರ್ಕಾರದ ಕಾರ್ಯಾಚರಣೆಯಲ್ಲಿ ಹಲವು ನ್ಯೂನತೆಗಳಿವೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಸರಕಾರ ಮಾರ್ಗಸೂಚಿ ಹೊರಡಿಸುವುದು ಬಿಟ್ಟು ಸರ್ಕಾರ ಬೇರೇನನ್ನೂ ಮಾಡುತ್ತಿಲ್ಲ. ಸರಕಾರದ ಹೇಳಿಕೆಗಳನ್ನು ನಂಬಬೇಡಿ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುದ್ಧ ನಡೆಯುವ ಬಗ್ಗೆ ತಿಂಗಳ ಹಿಂದೆಯೇ ಸೂಚನೆ ದೊರೆತಿತ್ತು. ಬೇರೆಲ್ಲಾ ದೇಶಗಳು ಉಕ್ರೇನ್‍ನಿಂದ ತಮ್ಮ ವಿದ್ಯಾರ್ಥಿಗಳನ್ನು ಯುದ್ಧ ಆರಂಭವಾಗುವ ಮುನ್ನವೇ ತೆರವು ಮಾಡಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಏನೂ ಮಾಡಿಲ್ಲ. ಅವರು ಉತ್ತರ ಪ್ರದೇಶದ ಚುನಾವಣೆ ಪ್ರಚಾರದಲ್ಲಿದ್ದರು. ಅವರಿಗೆ ಚುನಾವಣೆಯೇ ಮುಖ್ಯವಾಯಿತು ಎಂದು ವಿದ್ಯಾರ್ಥಿನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾತ್ರವಲ್ಲದೆ ಅತ್ತ ಉಕ್ರೇನ್ ಮತ್ತು ರಷ್ಯಾಗಳೂ ಭಾರತೀಯ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುತ್ತಿದ್ದರೆ ಇತ್ತ ಭಾರತವೂ ತನ್ನ ವಿದ್ಯಾರ್ಥಿಗಳು ಸುರಕ್ಷಿತವಾಗಿ ಕರೆಸಿಕೊಳ್ಳುವಲ್ಲಿ ಆಸಕ್ತಿ ತೋರುತ್ತಿಲ್ಲ. ನಾವು ಇಲ್ಲಿಂದ ಸುರಕ್ಷಿತವಾಗಿ ವಾಪಸ್ ಆಗುತ್ತೇವೆ ಅಥವಾ ನಮ್ಮನ್ನು ಸುರಕ್ಷಿತವಾಗಿ ತೆರವು ಮಾಡಲಾಗುತ್ತದೆ ಎಂಬ ನಂಬಿಕೆ ನಮಗೆ ಇಲ್ಲ. ನಮ್ಮ ಸರ್ಕಾರ ನಮ್ಮನ್ನು ಹೀಗೆ ವಂಚಿಸುತ್ತದೆ ಎಂದುಕೊಂಡಿರಲಿಲ್ಲ ಎಂದು ವಿದ್ಯಾರ್ಥಿಗಳು ಕಣ್ಣೀರಿಡುತ್ತಿದ್ದಾರೆ.

1 thought on “ಉಕ್ರೇನ್ ನಲ್ಲಿ ಸಿಲುಕಿಕೊಂಡ 15,000ಕ್ಕೂ ಅಧಿಕ ವಿದ್ಯಾರ್ಥಿಗಳು- ಸರ್ಕಾರ ಮಾರ್ಗಸೂಚಿ ಹೊರಡಿಸುವುದು ಬಿಟ್ಟು ಬೇರೇನನ್ನೂ ಮಾಡುತ್ತಿಲ್ಲ

Leave a Reply

Your email address will not be published. Required fields are marked *

error: Content is protected !!