ರಾಫೆಲ್ ಬಂದಿಳಿದ ಮೇಲೆ ಕೇಂದ್ರ ಸರ್ಕಾರದ ಮುಂದೆ 3 ಪ್ರಶ್ನೆಗಳನ್ನಿಟ್ಟ ರಾಹುಲ್ ಗಾಂಧಿ
ನವದೆಹಲಿ: ಫ್ರಾನ್ಸ್ ನೊಂದಿಗೆ ಕೇಂದ್ರ ಸರ್ಕಾರ 2016ರಲ್ಲಿ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಮಾಡಿಕೊಂಡಲ್ಲಿಂದ ವಿರೋಧ ಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದನ್ನು ಟೀಕಿಸುತ್ತಲೇ ಬಂದಿದ್ದರು. ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಲೋಕಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದರು. ಅವರ ಆರೋಪಗಳನ್ನು ಸರ್ಕಾರ ಅಲ್ಲಗಳೆಯುತ್ತಾ ಬಂದಿತ್ತು.
ನಿನ್ನೆ ಹರ್ಯಾಣದ ಅಂಬಾಲಾ ವಾಯುನೆಲೆಗೆ 5 ರಾಫೆಲ್ ಯುದ್ಧ ವಿಮಾನ ಬಂದಿಳಿದಿದೆ. ಇದಾದ ಬಳಿಕ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ಸರ್ಕಾರದ ಮುಂದೆ ಕಳೆದ ಸಾರ್ವತ್ರಿಕ ಚುನಾವಣೆಗೆ ಮೊದಲು ಇಟ್ಟಿದ್ದ ಪ್ರಶ್ನೆಗಳನ್ನು ಪರಿಷ್ಕರಿಸಿ ಕೇಳಿದ್ದಾರೆ.
ಕೇಂದ್ರ ಸರ್ಕಾರದ ಮುಂದೆ ರಾಹುಲ್ ಗಾಂಧಿಯವರ ಪ್ರಶ್ನೆಗಳು ಹೀಗಿವೆ: ಭಾರತೀಯ ವಾಯುಪಡೆಗೆ ರಾಫೆಲ್ ಯುದ್ಧ ವಿಮಾನ ಸೇರಿಸಿದ್ದಕ್ಕೆ ಅಭಿನಂದನೆಗಳು. ಈ ಮಧ್ಯೆ ಕೇಂದ್ರ ಸರ್ಕಾರ ನನ್ನ ಪ್ರಶ್ನೆಗಳಿಗೆ ಉತ್ತರಿಸಬಹುದೇ ಎಂದು ಕೇಳಿ, ಪ್ರತಿ ರಾಫೆಲ್ ಯುದ್ಧ ವಿಮಾನಕ್ಕೆ 526 ಕೋಟಿ ರೂಪಾಯಿಗಳ ಬದಲು 1670 ಕೋಟಿ ರೂಪಾಯಿಗಳು ಏಕಾಗುತ್ತದೆ?, 126 ರಾಫೆಲ್ ಯುದ್ಧ ವಿಮಾನ ಖರೀದಿಸುವ ಬದಲು ಸರ್ಕಾರ ಏಕೆ 36 ಯುದ್ಧ ವಿಮಾನಗಳನ್ನು ಖರೀದಿಸುತ್ತಿದೆ ಹಾಗೂ ಹೆಚ್ ಎಎಲ್ ಬದಲಿಗೆ ಬ್ಯಾಂಕಿಗೆ ದಿವಾಳಿ ಎಸಗಿದ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂಪಾಯಿಗಳ ಗುತ್ತಿಗೆ ಏಕೆ ನೀಡಲಾಗಿದೆ ಎಂದು 3 ಪ್ರಶ್ನೆಗಳನ್ನು ಕೇಳಿದ್ದಾರೆ.
ಫ್ರಾನ್ಸ್ ಜೊತೆ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಸುಪ್ರೀಂ ಕೋರ್ಟ್ ವರೆಗೆ ಹೋಗಿ ಅದು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದೆ. ಆದರೆ ಒಪ್ಪಂದ ಬಗ್ಗೆ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡುತ್ತಲೇ ಬಂದಿದೆ.