34 ವರ್ಷಗಳ ಬಳಿಕ ಮಹತ್ವದ ಹೆಜ್ಜೆ l ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಮೋದನೆ

ನವದೆಹಲಿ: ಕನಿಷ್ಠ ಪಕ್ಷ ಐದನೇ ತರಗತಿಯವರೆಗೆ ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯಲ್ಲಿ ಕಲಿಕೆಗೆ ಒತ್ತು ನೀಡುವ ಹೊಸ ಶಿಕ್ಷಣ ನೀತಿಗೆ ಕೇಂದ್ರ ಸರ್ಕಾರವು ಬುಧವಾರ ಒಪ್ಪಿಗೆ ನೀಡಿದೆ. ಶಾಲಾಪೂರ್ವ ಕಲಿಕೆಯಿಂದ ಪ್ರೌಢ ಶಿಕ್ಷಣದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಖಾತರಿ ಈ ನೀತಿಯಲ್ಲಿ ಇರುವ ಇನ್ನೊಂದು ಅಂಶ. ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 6ರಷ್ಟನ್ನು ಶಿಕ್ಷಣಕ್ಕೆ ವ್ಯಯ ಮಾಡಬೇಕು ಎಂಬ ಅಂಶವೂ ನೀತಿಯಲ್ಲಿ ಸೇರಿದೆ.

34 ವರ್ಷಗಳ ಬಳಿಕ ಹೊಸ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಸರ್ಕಾರವು ಅನುಮೋದಿಸಿದೆ.

ಎಂಟನೇ ತರಗತಿವರೆಗೂ ಶಿಕ್ಷಣದ ಮಾಧ್ಯಮವು ಮಾತೃಭಾಷೆ ಅಥವಾ ಸ್ಥಳೀಯ ಭಾಷೆ ಅಥವಾ ರಾಜ್ಯ ಭಾಷೆ ಆಗಿರಬೇಕು ಎಂಬುದಕ್ಕೆ ನೀತಿಯು ಆದ್ಯತೆ ನೀಡಿದೆ. ಶಾಲೆ ಮತ್ತು ಪ್ರೌಢ ಶಿಕ್ಷಣದ ಎಲ್ಲ ಹಂತಗಳಲ್ಲಿಯೂ ಸಂಸ್ಕೃತವನ್ನು ಐಚ್ಛಿಕವಾಗಿ ಕಲಿಯುವ ಅವಕಾಶ ನೀಡಲಾಗಿದೆ. 

‘ಭಾರತದ ಇತರ ಶಾಸ್ತ್ರೀಯ ಭಾಷೆಗಳು ಮತ್ತು ಸಾಹಿತ್ಯವನ್ನು ಕೂಡ ಐಚ್ಛಿಕವಾಗಿ ಕಲಿಯಲು ಅವಕಾಶ ಇದೆ. ಯಾವುದೇ ವಿದ್ಯಾರ್ಥಿಯ ಮೇಲೆ ಯಾವುದೇ ಭಾಷೆಯನ್ನು ಹೇರುವುದಿಲ್ಲ’ ಎಂದು ನೀತಿಯು ಅತ್ಯಂತ ಸ್ಪಷ್ಟವಾಗಿ ಹೇಳಿದೆ. 

ಶಿಕ್ಷಕರಿಗೆ ನಾಲ್ಕು ವರ್ಷಗಳ ಸಂಯೋಜಿತ ಪದವಿ ಕನಿಷ್ಠ ವಿದ್ಯಾರ್ಹತೆ
ಯಾಗಲಿದೆ. ಇದು 2030ರ ಹೊತ್ತಿಗೆ ಜಾರಿಗೆ ಬರಲಿದೆ.

ಉನ್ನತ ಶಿಕ್ಷಣದಲ್ಲಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿ
ಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ. ಮೇಜರ್‌ ಮತ್ತು ಮೈನರ್‌ ವಿಷಯಗಳಾಗಿ ತಮ್ಮ ಆಯ್ಕೆಯ ವಿಷಯಗಳ ಸಂಯೋಜನೆಯನ್ನು ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಲಿದೆ.

‘ಭೌತವಿಜ್ಞಾನ ಅಥವಾ ಎಂಜಿನಿಯರಿಂಗ್‌ ಕಲಿಯುವ ಹಲವು ವಿದ್ಯಾರ್ಥಿಗಳಿಗೆ ಸಂಗೀತದಲ್ಲಿ ಆಸಕ್ತಿ ಇರಬಹುದು. ಈಗ ಅವರು ಎಂಜಿನಿಯರಿಂಗ್‌ ಜತೆಗೆ ಸಂಗೀತವನ್ನೂ ಒಂದು ವಿಷಯವಾಗಿ ಕಲಿಯಬಹುದು’ ಎಂದು ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಮಿತ್‌ ಖರೆ ಹೇಳಿದ್ದಾರೆ. 

ಆರ್‌ಟಿಇ ವಿಸ್ತರಣೆ

ಮೂರನೇ ವರ್ಷದಿಂದ 18 ವರ್ಷದವರೆಗಿನ ಎಲ್ಲರಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲು ಬೇಕಾದ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಅದಕ್ಕಾಗಿ, ಒಂದನೇ ತರಗತಿಯಿಂದ ಮೊದಲಿನ ಮೂರು ವರ್ಷಗಳ ಶಿಕ್ಷಣ ಮತ್ತು 10ನೇ ತರಗತಿ ನಂತರದ 2 ವರ್ಷಗಳ ಶಿಕ್ಷಣಕ್ಕೆ ಆರ್‌ಟಿಇಯನ್ನು ವಿಸ್ತರಿಸಬೇಕು. ದುರ್ಬಲ ವರ್ಗಗಳಿಂದ ಬರುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಬಾಲ್ಯದಿಂದ ಪದವಿ ಪೂರ್ವದವರೆಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವುದನ್ನು ಖಾತರಿಪಡಿಸಬೇಕು ಎಂದು ನೀತಿಯು ಹೇಳಿದೆ. 

Leave a Reply

Your email address will not be published. Required fields are marked *

error: Content is protected !!