ದೇಶ ರಕ್ಷಿಸಲು ಬಯಸುವ ಪ್ರತಿಯೊಬ್ಬರಿಗೂ ನಾವು ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ- ಉಕ್ರೇನ್ ಅಧ್ಯಕ್ಷ
ಮಾಸ್ಕೋ: ದೀರ್ಘಕಾಲದ ಬಿಕ್ಕಟ್ಟಿನ ಬಳಿಕ ರಷ್ಯಾ ಗುರುವಾರ ಉಕ್ರೇನ್ ಮೇಲೆ ದಾಳಿ ಮಾಡಿದ್ದು, ರಷ್ಯಾದ ಪಡೆಗಳು ಈಗಾಗಲೇ ಉಕ್ರೇನ್ ರಾಜಧಾನಿ ಕೀವ್ ಅನ್ನು ಪ್ರವೇಶ ಮಾಡಿವೆ.
ಈ ಮಧ್ಯೆ ರಷ್ಯಾದ ಆಕ್ರಮಣವನ್ನು ಎದುರಿಸಲು ಸಿದ್ಧವಾಗಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು, ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ನಾವು ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು, ‘ನಮ್ಮ ನಗರಗಳ ರಸ್ತೆಗಳಲ್ಲಿ ಉಕ್ರೇನ್ ಪರ ನಿಲ್ಲಲು ಸಿದ್ಧವಾಗಿರಿ. ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ನಾವು ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ’ ಎಂದು ತಿಳಿಸಿದ್ದಾರೆ. ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ದೇಶವನ್ನು ರಕ್ಷಿಸಲು ಸಿದ್ಧವಾಗಿರುವ ನಾಗರಿಕರ ಮೇಲಿನ ಎಲ್ಲಾ ನಿರ್ಬಂಧಗಳನ್ನು ನಾವು ತೆಗೆದುಹಾಕುತ್ತೇವೆ’ ಎಂದೂ ಝೆಲೆನ್‌ಸ್ಕಿ ಹೇಳಿದ್ದಾರೆ.
ಇದಕ್ಕು ಮುನ್ನ ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ನಾಜಿ ಜರ್ಮನಿಯ ರೀತಿಯಲ್ಲಿಯೇ ರಷ್ಯಾ ನಮ್ಮ ಮೇಲೆ ದಾಳಿ ನಡೆಸಿದೆ. ದುಷ್ಟ ಮಾರ್ಗವನ್ನು ರಷ್ಯಾ ಅನುಸರಿಸಿದೆ. ಆದರೆ, ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ. ಮಾಸ್ಕೋ ಯಾವ ಕ್ರಮ ಕೈಗೊಂಡರೂ, ಉಕ್ರೇನ್ ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡುವುದಿಲ್ಲ ಉಕ್ರೇನ್ ಅಧ್ಯಕ್ಷರು ಹೇಳಿದ್ದರು